
ಕಲಬುರಗಿ:ಜು.7::ದೂರದರ್ಶನ ಕೇಂದ್ರದಲ್ಲಿ ಇದೀಗ ಹೊಸ ಕಾರ್ಯಕ್ರಮಗಳನ್ನು ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗುತ್ತಿದ್ದು ನಾಳೆ ಜುಲೈ 8ರಂದು ಮಧ್ಯಾಹ್ನ 2.30 ಕ್ಕೆ ರಾಷ್ಟ್ರೀಯ ಜಾಲದಲ್ಲಿ “ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಸಾಹಿತ್ತಿಕ ಸಾಧನೆ” ಕುರಿತಾಗಿ ವಿಶೇಷ ಚರ್ಚೆಯನ್ನು ಬಿತ್ತರಿಸಲಾಗುವುದು ಎಂದು ಕಲಬುರ್ಗಿ ದೂರದರ್ಶನ ಕೇಂದ್ರದ ಉಪನಿರ್ದೇಶಕರಾದ (ತಾಂತ್ರಿಕ) ಜಿ. ಗುರುಮೂರ್ತಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಸಾಹಿತ್ತಿ ಕ ಸಾಧನೆ ಕುರಿತಾದ ಚರ್ಚೆಯನ್ನು ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅವರು ನಡೆಸಿಕೊಡಲಿದ್ದಾರೆ. ಶರಣಬಸವೇಶ್ವರ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಡಾ. ಕಲ್ಯಾಣ ರಾವ್ ಜಿ.ಪಾಟೀಲ್ ,ಖ್ಯಾತ ಸಾಹಿತಿ, ಕವಯತ್ರಿ ಕಾವ್ಯಶ್ರೀ ಮಹಾಗಾವಂಕರ್ ಮತ್ತು ಕಲ್ಬುರ್ಗಿ ಸರ್ಕಾರಿ ಮಹಾವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಡಾ. ಶೈಲಜಾ ಬಾಗೇವಾಡಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಪ್ರಸಾರ ನಿರ್ವಾಹಕರಾದ ಸಂಗಮೇಶ್ ಸಂಯೋಜನೆ ಮಾಡಿದ್ದಾರೆ.
ಡಿ ಡಿ ಯಲ್ಲಿ ಮತ್ತೆ ಹೊಸ ಕಾರ್ಯಕ್ರಮಗಳಿಗೆ ಚಾಲನೆ:
ಕಲ್ಬುರ್ಗಿ ದೂರದರ್ಶನ ಕೇಂದ್ರದಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ಚಂದನ ವಾಹಿನಿಯಲ್ಲಿ ಪ್ರತಿ ಶನಿವಾರ ಮಧ್ಯಾಹ್ನ 2. 30 ಕ್ಕೆ ಬಿತ್ತರಿಸಲು ಎಲ್ಲ ಸಿದ್ಧತೆಗಳನ್ನು ಕೈಗೊಂಡು ಕಾರ್ಯಕ್ರಮ ಈಗಾಗಲೇ ಪ್ರಾರಂಭಗೊಂಡಿರುವುದು ಸಂತಸ ತಂದಿದೆ ಎಂದು ಹೇಳಿದ ಗುರುಮೂರ್ತಿ ಅವರು
ಕಲ್ಯಾಣ ಕರ್ನಾಟಕ ಭಾಗದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದರೊಂದಿಗೆ ಈ ಭಾಗದ ವಿಷಯ ಮತ್ತು ಸಮಸ್ಯೆಗಳಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪುರೇಷೆ ಮಾಡಲು ಈಗಾಗಲೇ ಕ್ರಮ ಕೈಗೊಂಡಿದ್ದು ತಾಂತ್ರಿಕ ತಂಡ ಹಾಗೂ ಕಾರ್ಯಕ್ರಮ ಸಿಬ್ಬಂದಿ ಜೊತೆಯಾಗಿ ಕೆಲಸ ಮಾಡುತ್ತಿದೆ ಇನ್ನಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗುವುದು . ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ಮಾಣ ಅಧಿಕಾರಿ ಡಾ. ಸದಾನಂದ ಪೆರ್ಲ ಮತ್ತು ಆಕಾಶವಾಣಿಯ ಪ್ರಸಾರ ನಿರ್ವಾಹಕರಾದ ಸಂಗಮೇಶ್ ಅವರ ಮಾರ್ಗದರ್ಶನ ಮತ್ತು ಸಂಯೋಜನೆಯೊಂದಿಗೆ ಉತ್ತಮ ಕಾರ್ಯಕ್ರಮಗಳನ್ನು ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಲು ಪ್ರತಿವಾರ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ವೀಕ್ಷಕರು ಪ್ರತಿ ಶನಿವಾರ ಮಧ್ಯಾಹ್ನ 2.30 ಕ್ಕೆ ಕಲಬುರ್ಗಿ ದೂರದರ್ಶನ ಕೇಂದ್ರದ ಕಾರ್ಯಕ್ರಮಗಳನ್ನು ವೀಕ್ಷಿಸಿ ಅಭಿಪ್ರಾಯ ತಿಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.