ಕಲ್ಪತರುನಾಡಿನಲ್ಲಿ ಮುಂದುವರೆದ ಕೊರೊನಾ ಆರ್ಭಟ: 1308 ಮಂದಿಗೆ ಸೋಂಕು, 6 ಜನ ಸಾವು

ತುಮಕೂರು, ಏ. 28- ಕಲ್ಪತರುನಾಡಿನಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ಮುಂದುವರೆದಿದ್ದು, ಒಂದೇ ದಿನ 1308 ಮಂದಿಗೆ ಸೋಂಕು ವಕ್ಕರಿಸಿ, 6 ಮಂದಿಯನ್ನು ಬಲಿ ತೆಗೆದುಕೊಂಡಿದೆ.
ಜಿಲ್ಲೆಯಲ್ಲಿ ಇಂದು 1308 ಮಂದಿಗೆ ಸೋಂಕು ತಗುಲುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 41856ಕ್ಕೆ ಏರಿಕೆಯಾಗಿದೆ.
ಇಂದು ವರದಿಯಾಗಿರುವ 1308 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುವ ಮೂಲಕ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
ತುಮಕೂರು ತಾಲ್ಲೂಕಿನಲ್ಲಿ 650, ಸಿರಾ ತಾಲ್ಲೂಕು 140, ತಿಪಟೂರು 131, ಕೊರಟಗೆರೆ 129, ಪಾವಗಡ 57, ಮಧುಗಿರಿ 54, ಚಿಕ್ಕನಾಯಕನಹಳ್ಳಿ 50, ಗುಬ್ಬಿ 36, ತುರುವೇಕೆರೆ 31 ಹಾಗೂ ಕುಣಿಗಲ್ ತಾಲ್ಲೂಕಿನಲ್ಲಿ 30 ಮಂದಿಗೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಇಂದು 465 ಮಂದಿ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 30,547 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.
ಸದ್ಯ 10,974 ಮಂದಿ ಸಕ್ರಿಯ ಸೋಂಕಿತರಿದ್ದು, 92 ಮಂದಿ ಐಸಿಯುಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.
ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಿಸದೆ 6 ಮಂದಿ ಅಸುನೀಗಿದ್ದಾರೆ. ಈ ಪೈಕಿ ಗುಬ್ಬಿಯ ಮಹಾಲಕ್ಷ್ಮಿ ನಗರದ 62 ವರ್ಷದ ಪುರುಷ, ಮಧುಗಿರಿ ತಾಲ್ಲೂಕು ಕತ್ತಿರಾಜನಹಳ್ಳಿ ಗ್ರಾಮದ 41 ವರ್ಷದ ಮಹಿಳೆ, ತುಮಕೂರು ತಾಲ್ಲೂಕು ಕೊತ್ತಿಹಳ್ಳಿ ಗ್ರಾಮದ 47 ವರ್ಷದ ಪುರುಷ ಮೃತಪಟ್ಟಿದ್ದಾರೆ.
ತುಮಕೂರು ನಗರದ ಸೋಮೇಶ್ವರ ಬಡಾವಣೆಯ 60 ವರ್ಷದ ಮಹಿಳೆ, ಸರಸ್ವತಿ ಪುರಂನ 60 ವರ್ಷದ ಪುರುಷ ಹಾಗೂ ಸಿರಾಗೇಟ್‌‌ನ 46 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ.