ಕಲ್ಪತರುನಾಡಿನಲ್ಲಿ ಒಂದೇ ದಿನ ೫೪೫ ಮಂದಿಗೆ ಸೋಂಕು!

ತುಮಕೂರು, ಏ. ೧೭- ಕಲ್ಪತರುನಾಡಿನಲ್ಲಿ ದಿನೇ ದಿನೇ ಕೊರೊನಾ ಸ್ಫೋಟವಾಗುತ್ತಿದ್ದು, ನಿನ್ನೆ ಒಂದೇ ದಿನ ೫೪೫ ಮಂದಿಗೆ ಸೋಂಕು ದೃಢಪಡುವ ಮೂಲಕ ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕೊರೊನಾ ೨ನೇ ಅಲೆ ಆರಂಭಟ ಆರಂಭವಾದಾಗಿನಿಂದಲೂ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೇ ಇದ್ದು, ಪ್ರತಿದಿನ ೨೦೦ ರಿಂದ ೩೦೦ ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿತ್ತು. ಆದರೆ ನಿನ್ನೆ ಒಂದೇ ದಿನ ೫ ಶತಕ ದಾಟಿದ್ದು, ಇದರಿಂದ ಜಿಲ್ಲೆಯ ಜನತೆ ಹೊರ ಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೊನಾ ಸೋಂಕಿನಿಂದ ನಿನ್ನೆ ಇಬ್ಬರು ಮೃತಪಟ್ಟಿದ್ದು, ೫೪೫ ಮಂದಿಗೆ ಸೋಂಕು ವಕ್ಕರಿಸಿದೆ. ಸದ್ಯ ೨೪೮೪ ಜನರಲ್ಲಿ ಸೋಂಕು ಸಕ್ರಿಯವಾಗಿದ್ದು, ೧೫ ಮಂದಿ ಐಸಿಯುನಲ್ಲಿದ್ದಾರೆ.
ಸೋಂಕು ತಗುಲಿದ್ದ ಅಶೋಕ ನಗರದ ೫೬ ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಅಲ್ಲದೆ ತುಮಕೂರು ತಾಲ್ಲೂಕಿನ ಊರುಕೆರೆಯ ಸೋಂಕಿತ ೬೯ ವರ್ಷ ಮಹಿಳೆಯ ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ೨೭೦ ಹಾಗೂ ಸೋಂಕಿತ ೨೦೨ ಜನ ಅನ್ಯ ಕಾರಣ ಸೇರಿದಂತೆ ಈವರೆಗೆ ಒಟ್ಟು ೪೭೨ ಮಂದಿ ಸಾವನ್ನಪ್ಪಿದ್ದಾರೆ.
ನಿನ್ನೆ ತುಮಕೂರು ತಾಲ್ಲೂಕಿನಲ್ಲಿ ೨೫೫, ಚಿಕ್ಕನಾಯಕನಹಳ್ಳಿಯಲ್ಲಿ ೨೯, ಗುಬ್ಬಿ ೩೧, ಕೊರಟಗೆರೆ ೩೪, ಕುಣಿಗಲ್ ೩೫, ಮಧುಗಿರಿ ೩೪, ಪಾವಗಡ ೩೨, ಸಿರಾ ೪೧, ತಿಪಟೂರು ೩೪ ಹಾಗೂ ತುರುವೇಕೆರೆ ತಾಲ್ಲೂಕಿನಲ್ಲಿ ೨೦ ಮಂದಿಗೆ ಸೋಂಕು ವಕ್ಕರಿಸಿದೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕು ಏರಿಕೆಯಾಗುತ್ತಿದ್ದರೂ ಈ ಮಹಾಮಾರಿಯ ನಿಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.
ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗುತ್ತಿದ್ದರೂ ಸಹ ಯಾವುದೇ ರೀತಿಯ ಕಠಿಣ ಕ್ರಮಗಳು ಜಾರಿಯಾಗಿಲ್ಲ. ಸರ್ಕಾರದ ರಾತ್ರಿ ಕರ್ಫ್ಯೂ ಹೊರತುಪಡಿಸಿದರೆ ಇನ್ಯಾವುದೇ ರೀತಿಯ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಕ್ರಮಗಳನ್ನು ಜಾರಿ ಮಾಡಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ಜನದಟ್ಟಣೆ ಜಾಸ್ತಿಯಾಗುತ್ತಲೇ ಇದೆ. ಬಿಸಿಲಿನ ಝಳ ಹೆಚ್ಚಿದಂತೆ ಸೋಂಕಿನ ಪ್ರಮಾಣವೂ ಹೆಚ್ಚಳವಾಗುತ್ತಿದೆ. ಅಲ್ಲದೆ ಈ ಮಹಾಮಾರಿಯಿಂದ ಸಾವನ್ನಪ್ಪುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಪರಿಸ್ಥಿತಿ ಕೈ ಮೀರುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.