ಕಲ್ಕುಡ ದೈವಸ್ಥಾನದಲ್ಲಿ ಜ್ಞಾನ ಯಜ್ಞ ಯಕ್ಷಗಾನ ಸರಣಿ ತಾಳಮದ್ದಳೆ ಉದ್ಘಾಟನೆ

ಸುಳ್ಯ,ನ.೧೦-ಸುಳ್ಯ ಕಲ್ಕುಡ ದೈವಸ್ಥಾನದ ಸಹಯೋಗದೊಂದಿಗೆ ಯುವಕ ಯಕ್ಷಗಾನ ಕಲಾರಂಗದ ಆಶ್ರಯದಲ್ಲಿ ಸುಳ್ಯ ಶೇಖರ ಮಣೆಯಾಣಿ ಸಂಯೋಜನೆಯಲ್ಲಿ ಪೂಕಳ ಲಕ್ಷ್ಮೀ ನಾರಾಯಣ ಭಟ್ ನಿರ್ದೇಶನದಲ್ಲಿ ನಡೆಯಲಿರುವ ಯಕ್ಷಗಾನ ತಾಳಮದ್ದಳೆ ಜ್ಞಾನ ಯಜ್ಞ ಇದರ ಉದ್ಘಾಟನಾ ಸಮಾರಂಭವು ಕಲ್ಕುಡ ದೈವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಸರಣಿ ತಾಳಮದ್ದಳೆಗೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸಾಹಿತಿ ಡಾ.ಪ್ರಭಾಕರ ಶಿಶಿಲ, ರಂಗ ಕಲಾವಿದ ಜೀವನ್ ರಾಮ್ ಸುಳ್ಯ, ಸುಳ್ಯ ಚಾರ್ಟೇಂಟ್ ಎಕೌಂಟ್ ಗಣೇಶ್ ಭಟ್, ಉದ್ಯಮಿ ಎಂ.ಬಿ.ಸದಾಶಿವ, ಯಕ್ಷಗಾನ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್, ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ಅಚ್ಚುತ ಅಟ್ಲೂರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಗಲಿದ ತೆಂಕು ಬಡಗು ತಿಟ್ಟುಗಳ ಯಕ್ಷಗಾನ ತಾಳಮದ್ದಲೆಯ ಮಹಾನ್ ಕಲಾವಿದ ವಿದ್ವಾಂಸ ಎಂ.ಆರ್. ವಾಸುದೇವ ಸಾಮಗ ರವರಿಗೆ ಶ್ರದ್ಧಾಂಜಲಿ ಅರ್ಪಿಸಿ ನುಡಿನಮನ ಸಲ್ಲಿಸಲಾಯಿತು.
ಬಳಿಕ ಎಂ.ಆರ್. ವಾಸುದೇವ ಸಾಮಗರ ಯಕ್ಷವೇದಿಕೆಯಲ್ಲಿ ಅಂಗದ ಸಂಧಾನ ಎಂಬ ತಾಳಮದ್ದಳೆಯು ಪ್ರದರ್ಶನಗೊಂಡಿತು. ನ. ೧೯ರ ವರೆಗೆ ತಾಳಮದ್ದಳೆ ನಡೆಯಲಿದೆ.