ಕಲೆ ಮನುಷ್ಯನ ಅಭಿವ್ಯಕ್ತಿ ಮಾಧ್ಯಮ

ಧಾರವಾಡ,ಡಿ21: ಕಲೆ ಒಂದು ಸಮಾಜದಲ್ಲಿನ ಜನಾಂಗದ ಸಂಸ್ಕ್ರತಿ ಉಳಿಸಿ ಬೆಳೆಸುವ ಜೊತೆಗೆ ಮನುಷ್ಯನ ಅಭಿವ್ಯಕ್ತಿ ಮಾಧ್ಯಮವೂ ಆಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿ ಹೇಳಿದರು.ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕಸ್ತೂರಿ ಪೌಂಡೇಶನ ಆಯೋಜಿಸಿದಕಲಾಧರೆ ಪ್ರಶಸ್ತಿ ಪ್ರದಾನ 2023 ರ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತ,ಕಸ್ತೂರಿ ಫೌಂಡೇಶನ್ ರವರು ವಿವಿಧ ಬಗೆಯ ಕಲಾಸಾಧಕರನ್ನುಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ. ಪ್ರಶಸ್ತಿ ನೀಡುವುದರಿಂದ ಕಲಾವಿದನಿಗೆ ಕಲಾಕ್ಷೇತ್ರದಲ್ಲಿ ಇನ್ನೂ ಹೆಚ್ಚು ಸೇವೆ ಮಾಡಲು ಹುಮ್ಮಸ್ಸು ನೀಡುತ್ತದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಕಲಾ ಚಟುವಟಿಕೆಗಳು ಅತ್ಯವಶ್ಯವಾಗಿದ್ದು ಕಲೆಯ ಮುಖಾಂತರ ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ, ಸ್ಮಾರ್ಟ ಕಲಿಕೆ, ಸೃಜನಶೀಲತೆ ಮತ್ತು ತಾರ್ಕಿಕ ಮನೋಭಾವನೆಯನ್ನು ಹೆಚ್ಚಿಸಲು ಪೂರಕವೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಖ್ಯಾತ ರಂಗನಿರ್ದೇಶಕಿ ವಿಶ್ವೇಶ್ವರಿ ಹಿರೇಮಠ ನೃತ್ಯ, ಸಂಗೀತ,ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ, ಜನಜೀವನ ಮತ್ತು ಉನ್ನತ ಸಾಂಸ್ಕ್ರತಿಕ ಪರಂಪರೆ ಬಿಂಬಿಸುವ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜ ಸೇವಕರಾದ ಶ್ರೀ ಕೃಷ್ಣಾ ಕೊಳ್ಳಾನಟ್ಟಿ ವಿದೇಶಿಕಲಾವಿದರನ್ನು ಕರೆಸಿ ಉನ್ನತ ಗೌರವ ಸಲ್ಲಿಸಲಾಗುತ್ತಿದೆ ನಮ್ಮ ಜೊತೆ ಬದುಕುತ್ತಿರುವ ಕಲಾವಿದರನ್ನು ಕಡೆಗಣಿಸುವ ಸಂಪ್ರದಾಯ ಬೆಳೆಯುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದರು.
ನಂತರ ಕ್ರೀಡಾ ಕ್ಷೇತ್ರದ ಶಿವಾನಂದ ಗುಂಜಾಳ, ಮಕ್ಕಳ ರಂಗಭೂಮಿ ಕ್ಷೇತ್ರದ ಸಿಕಂದರ ದಂಡಿನ, ಸವಾಲ್ ಭಜನಾ ಕ್ಷೇತ್ರದ ಮಾರುತಿ ಹಳಕಟ್ಟಿ, ಲಲಿತ ಕಲೆ ಕ್ಷೇತ್ರದ ಗಿರೀಶ ಸುಂಕದ, ಮಿಮಿಕ್ರಿ ಕಲಾವಿದ ಮಹಾಂತೇಶ ಹಡಪದ, ನೃತ್ಯ ನಿರ್ದೇಶಕರಾದ ರಘುವೀರ ಅರವೇಡ, ವಿವೇಕ್ ಎಂ.ಪಿ. ಸತೀಶ್ ಬಳ್ಳಾರಿ,ವಿಜಯ ಶಿಂಗ್ ಶೆಟ್ಟಿ, ರಾಹುಲ್ ಕಟ್ಟಿಮನಿ ಇವರಿಗೆ ಕಲಾಧರೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಗೀತ,ಮಿಮಿಕ್ರಿ, ನೃತ್ಯ, ಕೋಲಾಟ, ದೇಶಭಕ್ತಿ ಗೀತೆ,ಮುಂತಾದ ಜನಪದ ಕಲಾಪ್ರಕಾರಗಳು ಪ್ರದರ್ಶನಗೊಂಡವು.
ಈ ಕಾರ್ಯಕ್ರಮದಲ್ಲಿ ಪರಮೇಶ್ವರ್ ಕಾಳೆ, ಡಾ. ಕೆ.ರಾಮಚಂದ್ರ ನಾಯ್ಕ, ಶಶಿಕಲಾ ಶಂಕರ ಬಸವರೆಡ್ಡಿ, ಸಚೀನ ರಜಪೂತ, ಕಸ್ತೂರಿ ಪೌಂಡೆಶನ್‍ದ ಅಧ್ಯಕ್ಷರಾದ ಕಲ್ಮೇಶ ತಳವಾರ, ಉಪಾಧ್ಯಕ್ಷರಾದ ಕಸ್ತೂರಿ ತಳವಾರ, ಪ್ರಕಾಶ ಮಲ್ಲಿಗವಾಡ, ಪ್ರಕಾಶ ಕ್ಷತ್ರೀಯ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಜ್ ಕರಣ್ ನಿರೂಪಿಸಿದರು, ಸೈಯದ್ ಎ.ಎಂ. ಸ್ವಾಗತಿಸಿದರು, ಸುನಿಲ ಅರಳಿಕಟ್ಟಿ ವಂದಿಸಿದರು.