ಕಲೆ ಉಳಿವಿಕೆಗಾಗಿ ಯುವ ಮನಸ್ಸುಗಳ ಪಾತ್ರ ಅವಶ್ಯ: ನದಾಫ್

ಕಲಬುರಗಿ,ಜ.5:ಇಂದಿನ ದಿನಗಳಲ್ಲಿ ಕಲೆ, ಸಂಸ್ಕøತಿ ಉಳಿಯಬೇಕಾದರೆ ಯುವ ಮನಸ್ಸುಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಪತ್ರಕರ್ತ ಹಾಗೂ ಸಾಹಿತಿ ದಸ್ತಗೀರ್ ನದಾಫ್ ಯಳಸಂಗಿ ಅವರು ಹೇಳಿದರು.
ನಗರದ ಆಳಂದ್ ಕಾಲೋನಿಯಲ್ಲಿ ಭಗತ್ ಯುವ ಬಳಗ ಹಾಗೂ ನವಚೇತನ ಕಲಾ ಸಂಸ್ಥೆಯ ವತಿಯಿಂದ ಹೊಸ ವರ್ಷದ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವ ಪೀಳಿಗೆ ದುಶ್ಚಟಗಳಿಂದ ದಾರಿ ತಪ್ಪುತ್ತಿರುವ ಇಂದಿನ ದಿನಗಳಲ್ಲಿ ಯುವ ಬಳಗ ಮಾಡುತ್ತಿರುವ ಸಾಮಾಜಿಕ, ಸಾಂಸ್ಕøತಿಕ ಕಾರ್ಯ ನೋಡಿ ಸಂತಸವಾಗುತ್ತಿದೆ ಎಂದರು.
ಕಲೆಯೆನ್ನುವುದು ನಶಿಸಿ ಹೋಗುತ್ತಿರುವ ಪರಿಸ್ಥಿತಿಯಲ್ಲಿ ಕಲೆ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಗತ್ ಯುವ ಬಳಗ ವಿಭಿನ್ನವಾಗಿ ಸಂಘಟಿಸುತ್ತಿರುವುದಲ್ಲದೇ ಸಾಮಾಜಿಕವಾಗಿ, ಶೈಕ್ಷಣಿಕವಾಗಿಯೂ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ್ ಹೂಗಾರ್ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಯುವ ರಂಗಭೂಮಿ ಕಲಾವಿದೆ ವಿಜಯಲಕ್ಷ್ಮೀ ದೊಡ್ಡಮನಿ ಅವರು ಮಾತನಾಡಿ, ನನ್ನೆಲ್ಲ ಸಹೋದರರು ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ಅವರ ಹೆಜ್ಜೆಗೆ ಗೆಜ್ಜೆ ಕಟ್ಟುವ ಕೆಲಸವನ್ನು ಮಾಡಿದ್ದೀರಿ. ತಮಗೆಲ್ಲ ಧನ್ಯವಾದಗಳು ಎಂದರು.
ಯುವಕರ ಮುಂದಿನ ಎಲ್ಲ ಹೆಜ್ಜೆಗಳು ಅವರ ಏಳಿಗೆಯತ್ತ ಸಾಗಲಿ. ಅವರ ಈ ಮೊದಲ ಹೆಜ್ಜೆ ಲಕ್ಷ ಹೆಜ್ಜೆಯಾಗಿ ಮುಂದುವರೆಯಲಿ ಎಂದು ಅವರು ಆಶಿಸಿದರು.
ನಂತರ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಲಕ್ಷ್ಮೀಕಾಂತ್ ಜೋಶಿಯವರ ಚೊಚ್ಚಲ ನಿರ್ದೇಶನದಲ್ಲಿ ಏಕಪಾತ್ರಾಭಿನಯಗಳು ಪ್ರದರ್ಶನಗೊಂಡವು. ದೇವಾನಂದ್ ಎಸ್.ಪಿ., ಅವರ ಸುಮಧುರ ಗಾಯನ ಪ್ಷೇಕ್ಷಕರನ್ನು ಆಕರ್ಷಿಸಿದವು. ಆನಂತರ ಚಿರಂಜೀವಿ ಗುತ್ತೇದಾರ್ ಅವರ ಸಂಯೋಜನೆಯಲ್ಲಿ ಮಕ್ಕಳಿಂದ ನೃತ್ಯಗಳು ಪ್ರದರ್ಶನಗೊಂಡವು. ಸೋಮಶಂಕರ್ ಜಿ. ಬಿರಾದಾರ್ ಅವರ ಬೆಳಕಿನ ನಿರ್ವಹಣೆಯಲ್ಲಿ ಕಾರ್ಯಕ್ರಮ ಕಳೆಕಟ್ಟಿತು. ಅಂಬರೀಷ್ ಮರಾಠಾ ಮತತು ಕವಿತಾ ಅವರು ಕಾರ್ಯಕ್ರಮ ನಿರೂಪಿಸಿದರು.
ರಂಗದ ಮೇಲೆ ಭಾಗ್ಯಶ್ರೀ ಮಾಲಿಪಾಟೀಲ್ (ವೀರವನಿತೆ ಚನ್ನಮ್ಮ), ಅಭಿಷೇಕ್ ಹೊಸಗೌಡ (ಬುಡಬುಡಕಿ), ಚಿರಂಜೀವಿ ಗುತ್ತೇದಾರ್ (ವೀರ ಅಭಿಮನ್ಯು), ಹರ್ಶಿತ್, ರೋಹಿತ್ (ರೈತರು), ದರ್ಶನ್ (ಸತ್ಯ ಹರಿಶ್ಚಂದ್ರ), ಪ್ರಮೋದ್ (ಏಕಲವ್ಯ), ನಿಖಿಲ್, ಶೃದ್ಧಾ, ಪ್ರದೀಪ್, ಶಾಂತಕುಮಾರ್, ಸ್ನೇಹಾ, ಸಮೀಕ್ಷಾ, ಆರಾಧ್ಯ, ಬಸಯ್ಯ, ಶೇಖರ್ ಹಾಗೂ ಹಲವು ಮಕ್ಕಳಿಂದ ನೃತ್ಯ ಪ್ರದರ್ಶನಗೊಂಡವು.