ಕಲೆಯ ಬಗ್ಗೆ ಜನರಲ್ಲಿ ಅರಿವು ಅಗತ್ಯ

ಅರಸೀಕೆರೆ, ನ. ೯- ಕಲೆಗಾಗಿ ಕಲೆಯಲ್ಲ, ಬದುಕಿಗಾಗಿ ಎಂದು ನಂಬಿರುವ ಸಮುದಾಯದ ಜನರ ನಡುವೆ ಹೋಗಿ ಅವರ ಸಮಸ್ಯೆಗಳ ಬಗ್ಗೆ ಅರಿವು ಹುಟ್ಟಿಸುವ ಹಾಗೂ ಪರಿಹಾರದ ಮಾರ್ಗೋಪಾಯ ಕುರಿತಾದ ಬೀದಿ ನಾಟಕಗಳನ್ನು ಪ್ರಯೋಗಿಸುತ್ತಾ ಸಮಾಜವನ್ನು ಎಚ್ಚರಿಸಲು ಶ್ರಮಿಸುತ್ತಿರುವುದಾಗಿ ಸಾಮಾಜಿಕ ಹೋರಾಟಗಾರ ಹೆಗ್ಗೋಡಿನ ಪ್ರಸನ್ನಕುಮಾರ್ ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಗ್ರಾಮ ಸೇವಾ ಸಂಘ ಸಹಯೋಗದಲ್ಲಿ ಬೆಂಗಳೂರಿನ ಸಮುದಾಯ ಸಂಘಟನೆ ಹೆಗ್ಗೋಡಿನ ಬೀದಿ ರಂಗಪಯಣ ಎಂಬ ಕೋವಿಡ್-೧೯ ಸೋಂಕು ಕುರಿತ ಒಳಿತು ಮಾಡು ಮನಸಾ ಬೀದಿ ನಾಟಕ ಪ್ರದರ್ಶನಕ್ಕೆ ನಗರದ ಪಿ.ಪಿ. ವೃತ್ತದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್-೧೯ ಸಾಂಕ್ರಾಮಿಕ ರೋಗದ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಶ್ರಮ ಜೀವಿಗಳು, ವಲಸೆ ಕಾರ್ಮಿಕರು ಗ್ರಾಮ ಕೈಗಾರಿಕೆಯ ಕುಶಲ ಕರ್ಮಿಗಳು ಎದುರಿಸಿದ ಬಿಕ್ಕಟ್ಟು ಹಾಗೂ ಕೋವಿಡ್-೧೯ ವಿರುದ್ಧದ ಹೋರಾಟದಲ್ಲಿ ನಮ್ಮ ವೈದ್ಯಕೀಯ ಸಮೂಹ ತೋರಿದ ಬದ್ಧತೆಯ ಕುರಿತಂತೆ ಸಾಂಸ್ಕೃತಿಕ ಪ್ರತಿಕ್ರಿಯೆಯಾಗಿ ಒಂದು ಕಿರು ಜಾಥಾವನ್ನು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಮಾಜಕ್ಕೆ ಅಂಟಿದ ಸಾಂಕ್ರಾಮಿಕಗಳು ಹಲವು. ಕೋವಿಡ್-೧೯ ಸೋಂಕು ಪಿಡುಗು ಹಠಾತ್ತಾಗಿ ಬಂದು ಜನರ ಬದುಕನ್ನು ಹೈರಾಣಾಗಿಸಿ ಇಡೀ ಸಮಾಜದ ವ್ಯವಸ್ಥೆಯನ್ನು ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಪಿಡುಗನ್ನು ಎದುರಿಸಲು ಸದ್ಯ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದೇ ಆಯುಧಗಳಾಗಿವೆ. ವೈದ್ಯಕೀಯ ಸಂಶೋಧನೆಗಳು ಲಸಿಕೆ ಕಂಡು ಹಿಡಿಯುವ ಪ್ರಯತ್ನ ಕೂಡ ಮಾಡುತ್ತಿವೆ ಎಂದರು. ಸಮುದಾಯ ಬೀದಿ ನಾಟಕ ತಂಡದ ಕಲಾವಿದರಾದ ಶ್ವೇತ ನಾಗಲಕ್ಷ್ಮಿ, ಕಾವ್ಯ ಅಚ್ಚುತ್, ಅಶ್ವಿನಿ ದೀಪಕ್ ರಾಜ್, ಶರತ್‌ಕುಮಾರ್, ಮದನ್ ಶೆಟ್ಟಿ, ಮೋಹನ್‌ಕುಮಾರ್, ದರ್ಶನ್ ಹೊನ್ನಾಲೆ ಭಾಗವಹಿಸಿದ್ದರು.