ಕಲೆಯಲ್ಲಿನ ಪರಿಶ್ರಮ ಯಾವತ್ತೂ ವ್ಯರ್ಥವಾಗದು: ವಿಜಯ್ ಶೆಟ್ಟಿ

ಕಾರ್ಕಳ, ಜ.೧೧- ಯಾವುದೇ ಕಲಿಕೆ ಇರಲಿ ಅದೊಂದು ತಪಸ್ಸಿನಂತೆ. ಮನಸ್ಸನ್ನು ನಿರಂತರ ಕ್ರಿಯಾಶೀಲವಾಗಿ ಇರಿಸುವ ಜೊತೆ ಕಲೆಯಲ್ಲಿನ ಪರಿಶ್ರಮ ಯಾವತ್ತೂ ವ್ಯರ್ಥವಾಗುವುದಿಲ್ಲ. ಕಲಾವಿದನ ಕೈಯಲ್ಲಿ ಅರಳಿದ ಕೃತಿ ಕಲಾವಿದನಿಗೆ ಸಾರ್ಥಕತೆಯನ್ನು, ಕಲಾಕೃತಿಯನ್ನು ನೋಡಿದವರಿಗೆ ಹೊಸ ಪ್ರೇರಣೆಯನ್ನು ನೀಡುತ್ತದೆ ಎಂದು ಕಾರ್ಕಳ ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ್ ಶೆಟ್ಟಿ ನುಡಿದರು.

ಅವರು ದೃಶ್ಯಕಲೆ, ಶಿಲ್ಪಕಲೆ (ಆಯಾಮ – ೩) ವಿಷಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಗೌತಮಿ ಕಾಮತ್ ಅವರನ್ನು ಕಾರ್ಕಳ ವನಿತಾ ಸಮಾಜದ ಸಭಾಂಗಣದಲ್ಲಿ ಜ.೭ ಭಾನುವಾರ ಹೊಸಸಂಜೆ ಬಳಗದ ಆಶ್ರಯದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.

ಹಳೆಯ ಕಾಲಕ್ಕೆ ಹೋಲಿಸಿದರೆ ಆಧುನಿಕ ದಿನಮಾನಗಳಲ್ಲಿ ಕಲಾ ಶಿಕ್ಷಣಕ್ಕೆ ಹೆಚ್ಚು ಅವಕಾಶಗಳಿವೆ. ಅದಕ್ಕೊಂದು ಅಕಾಡೆಮಿಕ್ ಸ್ವರೂಪ ಲಭ್ಯವಾಗಿದೆ. ಮಾರ್ಗದರ್ಶನ, ಪ್ರೋತ್ಸಾಹ, ತರಬೇತಿಯ ಅವಕಾಶಗಳು ಹೆಚ್ಚಿವೆ. ಪ್ರತಿಭೆ ಇದ್ದರೆ ಅವಕಾಶಗಳೂ ಸಾಕಷ್ಟಿವೆ. ಜಗತ್ತು ಆರ್ಥಿಕವಾಗಿ ಮುಂದೆ ಬಂದಂತೆಲ್ಲ ಕಲಾವಿದರ ಕಲಾಕೃತಿಗಳಿಗೂ ಉತ್ತಮ ಬೇಡಿಕೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಲಯನ್ಸ್ ವಲಯಾಧ್ಯಕ್ಷ ನೋವೆಲ್ ಜೆ. ಡಿಸಿಲ್ವಾ, ನಲ್ಲೂರು ಗ್ರಾಮ ಪಂಚಾಯತ್ ಸದಸ್ಯೆ ಗಾಯತ್ರಿ ಪ್ರಭು, ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯೆ ರೇಖಾ ಕಾಮತ್, ರೋಟರಿ ಕ್ಲಬ್ ಕಾರ್ಯದರ್ಶಿ ಶಶಿಕಲಾ ಕುಮಾರಯ್ಯ, ಶಿಕ್ಷಕಿಯರಾದ ಶಮ್ಯ, ಮಮತಾ, ಸಂಗೀತಾ ಕಾಮತ್ ಮುನಿಯಾಲು, ಯಕ್ಷಗಾನ ತಾಳಮದ್ದಳೆ ಅರ್ಥದಾರಿ ಸಂಜಿತ್ ಕನ್ನಡ ಬೆಳುವಾಯಿ ಶುಭ ಹಾರೈಸಿದರು.

ರಂಜನ್ ನಾಯಕ್ ಸ್ವಾಗತಿಸಿದರು. ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಕಾರ್‍ಯಕ್ರಮ ನಿರ್ವಹಿಸಿದರು. ಶಶಾಂಕ್ ಪೈ ವಂದಿಸಿದರು.