ಬಿಜೆಪಿಗೆ ಪರಂ ತಿರುಗೇಟು

ಬೆಂಗಳೂರು, ನ. ೨- ಕೇಂದ್ರದ ಕಾಂಗ್ರೆಸ್ ನಾಯಕರುಗಳಾದ ರಣದೀಪ್ ಸುರ್ಜೇವಾಲ್ ಮತ್ತು ಕೆ.ಸಿ. ವೇಣುಗೋಪಾಲ್ ಕಲೆಕ್ಷನ್‌ಗಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಕಿಡಿಕಾರಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಹಾಗಾದರೆ ಬಿಜೆಪಿ ಸರ್ಕಾರವಿದ್ದಾಗ ಆ ಪಕ್ಷದ ಕೇಂದ್ರದ ನಾಯಕರುಗಳು ರಾಜ್ಯಕ್ಕೆ ಬಂದು ಕಲೆಕ್ಷನ್ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಇದ್ದಾಗ ಆ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ರಾಜ್ಯಕ್ಕೆ ಪದೇ ಪದೇ ಬರುತ್ತಿದ್ದರು. ಅವರು ಬರುತ್ತಿದ್ದದ್ದೂ ಕಲೆಕ್ಷನ್‌ಗಾಗಿನಾ ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿರುವ ಅವರು, ಬಿಜೆಪಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಯಾರೂ ಕೂಡಾ ಬಹಿರಂಗ ಹೇಳಿಕೆ ನೀಡಬಾರದು ಎಂದು ವರಿಷ್ಠರು ನೀಡಿರುವ ಸೂಚನೆಗೆ ಪ್ರತಿಕ್ರಿಯಿಸಿದ ಅವರು, ಈ ಹೇಳಿಕೆಗಳಿಂದ ಗೊಂದಲಗಳಾಗುತ್ತವೆ. ಹಾಗಾಗಿ ಅದಕ್ಕೆ ವರಿಷ್ಠರು ವರಿಷ್ಠರು ಕಡಿವಾಣ ಹಾಕಿರಬಹುದು ಎಂದರು.
ಶಾಸಕರಿಗೆ ವರಿಷ್ಠರು ಎಚ್ಚರಿಕೆ ಕೊಟ್ಟಿರುವ ಬಗ್ಗೆ ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ಅವರನ್ನು ನಮ್ಮನ್ನು ಕರೆಸಿ ಮಾತನಾಡಿ ಸುರ್ಜೇವಾಲ ಮತ್ತು ವೇಣುಗೋಪಾಲ್ ರವರು ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳನ್ನು ನಿನ್ನೆ ಭೇಟಿ ಮಾಡಿ ಚರ್ಚಿಸಿದ್ದಾರೆ. ಬೇರೆ ಯಾವುದೇ ನಾಯಕರ ಜತೆ ಚರ್ಚೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದರು
ಬಿಜೆಪಿ ನಾಯಕರ ಬರ ಪ್ರವಾಸವನ್ನು ಗೇಲಿ ಮಾಡಿದ ಅವರು, ಬಿಜೆಪಿ ನಾಯಕರು ಬರ ಪ್ರವಾಸ ಮಾಡುವ ಬದಲು ರಾಜ್ಯಕ್ಕೆ ಕೇಂದ್ರದಿಂದ ಬರ ಪರಿಹಾರ ಕೊಡಿಸಲಿ ಎಂದು ಒತ್ತಾಯಿಸಿದರು.
ಬರ ಪರಿಹಾರಕ್ಕೆ ಆಗ್ರಹಿಸಿ ಕೇಂದ್ರಕ್ಕೆ ನಿಯೋಗ ಕರೆದೊಯ್ಯುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.