ಕಲುಷಿತ ನೀರು ರಸ್ತೆ, ಜಮೀನಿಗೆ ಹರಿದು ಸಾಂಕ್ರಾಮಿಕ ರೋಗ ಹಬ್ಬಲು ಕಾರಣವಾದ ಸಮಸ್ಯೆ ಪರಿಹರಿಸಿದ ಅಧಿಕಾರಿಗಳು

ಯಾದಗಿರಿ; ಏ.02: ಜಿಲ್ಲಾಡಳಿತ ಡಿಸಿ ಭವನದಿಂದ ಕೇವಲ 2 ಕಿ.ಮೀ. ಅಂತರದಲ್ಲಿರುವ ಮುದ್ನಾಳ ಗ್ರಾಮದಲ್ಲಿ ಚರಂಡಿ ತುಂಬಿ ಸಿಸಿ ರಸ್ತೆ ಮೇಲೆ ನೀರು ಹರಿಯುತ್ತಿದ್ದರೂ ಕ್ರಮ ಕೈಗೊಳ್ಳದೇ ಇರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎಂದು ಆರೋಪಿಸಿದ ಬೆನ್ನಲ್ಲೇ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದ್ದಾರೆ ಎಂದು

ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ನಂತರ ಹೇಳಿಕೆ ನೀಡಿರುವ ಅವರು, ಚರಂಡಿ ಸ್ವಚ್ಛಗೊಳಿಸಿ, ಪಿವಿಸಿ ಪೈಪ್ ತೆಗೆದು ಜಿಐ ಪೈಪ್ ಅನ್ನು ಜೋಡಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿದ್ದಾರೆ.

ಇದಲ್ಲದೇ ಸ್ಥಳದಲ್ಲಿ ಬಂದಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಲಕಂಠ ಅವರಿಗೆ ಸಮಸ್ಯೆ ವಿವರಿಸಿದ ಮುದ್ನಾಳ, ಚರಂಡಿ ಸ್ವಚ್ಚವಾಗಿದೆ ಆದರೆ ಇನ್ನುಳಿದ ಕೆಲಸಗಳಾದ ಸಾಯಿಬಣ್ಣ ಕೊಳ್ಳಿಯವರ ಮನೆಯಿಂದ ಕೆರೆ ವರೆಗೆ ಚರಂಡಿ ಮತ್ತು ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಮತ್ತು ಊರುಬಂಡಿಯಿಂದ ದ್ಯಾವಮ್ಮಾಯಿ ಗುಡಿ ಯಿಂದ ಸಾಯಿಬಣ್ಣ ಕೊಳ್ಳಿ ಇವರ ಮನೆಯವರೆಗೆ ಚರಂಡಿ ಆಗಬೇಕು ಮತ್ತು ಶಿವಪ್ಪ ಅವರ ಮನೆಯಿಂದ ಭೀಮರೆಡ್ಡಿ ಶರಣಪ್ಪಗೌಡ ಅವರ ಮನೆ ಬಲಭಾಗದಿಂದ ಹಣಮಂತ ಪ್ಯಾಟಿ ಅವರ ಮನೆಯ ವರೆಗೆ ಸಿಸಿ ರಸ್ತೆ ಆಗಬೇಕು.

ಇವೆಲ್ಲವೂ ಗ್ರಾಪಂ ಕೇಂದ್ರಸ್ಥಾನದ ಗ್ರಾಮದಲ್ಲಿ ಇರುವ ಸಮಸ್ಯೆಗಳಾಗಿವೆ. ಈ ಎಲ್ಲ ಜಾಗೆಗಳು ಸರ್ಕಾರಿ ಜಾಗೆಯಾಗಿದ್ದು ಇಲ್ಲಿ ಇವುಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು.

ರೈತರ ಖಾಸಗಿ ಜಮೀನಿನಲ್ಲಿ ಅವರ ಗಮನಕ್ಕೆ ತಾರದೆ ರಸ್ತೆ ಚರಂಡಿ ನಿರ್ಮಿಸಿ ಹಣ ಲೂಟಿ ಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ ಅಗತ್ಯವಿಲ್ಲದ ಕಡೆ ಮಾಡುವುದರ ಬದಲು ಅಗತ್ಯ ಇರುವ ಕಡೆ ರಸ್ತೆ ಚರಂಡಿ ನಿರ್ಮಿಸಬೇಕು ಅದರಿಂದ ಜನತೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಇಷ್ಟು ಮಾಡಿದರೆ ಸಾಲದು ಮೇಲಿನ ಎಲ್ಲ ಸಮಸ್ಯೆಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡಬೇಕು ಇಲ್ಲವಾದಲ್ಲಿ ಮುಂದೆ ಹೋರಾಟ ರೂಪಿಸಲಾಗುವುದು ಕೂಡಲೇ ಕ್ರಮ ಕೈಗೊಂಡು ರಸ್ತೆ ಚರಂಡಿಗಳನ್ನು ನಿರ್ಮಿಸಬೇಕೆಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶರಣಪ್ಪ ಹದನೂರ, ಮತ್ತು ನಿಜಶರಣ ಅಂಬಿಗರ ಚೌಡಯ್ಯನ ಸಂಘದ ಪದಾಧಿಕಾರಿಗಳು ಮತ್ತು ವಿಠಲ್ ಹೇರೂರು ಅಭಿಮಾನಿಗಳು ಉಪಸ್ಥಿತರಿದ್ದರು.