ಕಲುಷಿತ ನೀರು : ಮೃತರಿಗೆ ಪರಿಹಾರ ನೀಡಲು ಒತ್ತಾಯ

ರಾಯಚೂರು.ಜು.೨೫- ಕಲುಷಿತ ನೀರಿನಿಂದ ಮೃತಪಟ್ಟ ಕುಟುಂಬಗಳು ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರಿಗೆ ಕೂಡಲೆ ಪರಿಹಾರ ಒದಗಿಸುವಂತೆ ನಗರಸಭೆ ಅಧ್ಯಕ್ಷರಿಗೆ ವಾರ್ಡ್ ೦೪ ರ ನಗರಸಭೆ ಸದಸ್ಯರಾದ ಬಿ.ರಮೇಶ ಅವರು ಒತ್ತಾಯಿಸಿದ್ದಾರೆ.
ಮೇ. ಮತ್ತು ಜೂನ್ ತಿಂಗಳಲ್ಲಿ ನಗರದಲ್ಲಿ ಕಲುಷಿತ ನೀರು ಪೂರೈಕೆಯಿಂದ ಏಳು ಜನ ಮೃತಪಟ್ಟಿದ್ದಾರೆ. ನೂರಾರು ಜನರು ಕಲುಷಿತ ನೀರಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಸಾವಿರಾರು ರೂ. ಕಳೆದುಕೊಂಡಿದ್ದಾರೆ. ಮೃತ ಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ೫ ಲಕ್ಷ, ನಗರಸಭೆಯಿಂದ ತಲಾ ೧೦ ಲಕ್ಷ ಪರಿಹಾರ ಘೋಷಿಸಲಾಗಿತ್ತು. ಆದರೆ, ಮೂರು ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದ್ದು, ಉಳಿದ ನಾಲ್ಕು ಕುಟುಂಬಗಳಿಗೆ ಇನ್ನೂವರೆಗೂ ಪರಿಹಾರ ವಿತರಣೆಗೊಂಡಿಲ್ಲ.
ಅಲ್ಲದೆ, ನಗರಸಭೆ ಸಾಮಾನ್ಯ ಸಭೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕುಟುಂಬಗಳಿಗೆ ತಲಾ ೨೦ ಸಾವಿರ ಪರಿಹಾರ ಒದಗಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಇಲ್ಲಿವರೆಗೂ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೆ ಎಲ್ಲಾ ಕುಟುಂಬಗಳಿಗೆ ಪರಿಹಾರ ಮಂಜೂರು ಮಾಡುವಂತೆ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ನಗರಸಭೆ ಮತ್ತು ಜಿಲ್ಲಾಡಳಿತ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿರುವುದು ಶ್ಲಾಘನೀಯವಾಗಿದ್ದು, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಒದಗಿಸುವ ಮೂಲಕ ನಗರಸಭೆ ಸಾಮಾನ್ಯ ಸಭೆ ನಿರ್ಣಯವನ್ನು ಅನುಷ್ಠಾನಗೊಳಿಸುವಂತೆ ಕೋರಿದ್ದಾರೆ.