ಕಲುಷಿತ ನೀರು ಪ್ರಕರಣಕ್ಕೆ ಸೇಡಿನ ಜ್ವಾಲೆ ಕಾರಣ

೧೨೦ ಮಂದಿ ಅಸ್ವಸ್ಥ
ಚಿತ್ರದುರ್ಗ,ಆ.೦೩: ಕಲುಷಿತ ನೀರು ಸೇವಿಸಿ ವಾಂತಿ, ಭೇದಿಯಿಂದ ಮೂರು ಜನರು ಮೃತಪಟ್ಟು, ಮಕ್ಕಳು ಸೇರಿದಂತೆ ೧೨೦ ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ಕವಾಡಿಗರಹಟ್ಟಿಯಲ್ಲಿ ನಡೆದಿರುವ ಅಂತರ್ಜಾತಿ ಪೋಕ್ಸೋ ಪ್ರಕರಣದ ಸೇಡಿನ ಜ್ವಾಲೆಯೇ ಮೂಲ ಕಾರಣ ಎಂಬ ಅಂಶ ಬಡಾವಣೆಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ.ಕಳೆದ ಮೂರು ದಿನಗಳ ಹಿಂದೆ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮಂಜುಳ, ರಘು ಹಾಗೂ ಪ್ರವೀಣ್ ಎಂಬು ಮೂರು ಜನರು ಸಾವನ್ನಪ್ಪಿದರು. ಅಲ್ಲದೆ ಮೊದಲ ದಿನ ೨೦ ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದರೆ ಎರಡನೆ ದಿನ ೬೦ ಜನ, ಇಂದು ೪೫ ಜನರು ವಾಂತಿ, ಭೇದಿಯಿಂದ ಅಸ್ವಸ್ಥಗೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಬಸವೇಶ್ವರ ಆಸ್ಪತ್ರೆಗೆ ದಾಖಲಾಗುವ ಮೂಲಕ ದಿನೇ ದಿನೇ ಅಸ್ವಸ್ಥರ ಸಂಖ್ಯೆ ಏರಿಕೆ ಆಗುತ್ತಲೆ ಇದೆ.
ಪ್ರಕರಣಕ್ಕೆ ಮೂಲ ಕಾರಣ ಕಳೆದ ಒಂದೂವರೆ ವರ್ಷಗಳ ಹಿಂದೆ ಬಡಾವಣೆಯ ದಲಿತ ಜನಾಂಗಕ್ಕೆ ಸೇರಿದ ನೀರಗಂಟೆ ಯುವಕ ಅದೇ ಬಡಾವಣೆಯ ಲಿಂಗಾಯುತ ಜನಾಂಗಕ್ಕೆ ಸೇರಿದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಪೋಕ್ಸೋ ಪ್ರಕರಣದಡಿ ಜೈಲು ಸೇರಿ, ನಂತರ ಹೊರ ಬಂದಿರುವ ಯುವಕನ ಕುಟುಂಬಸ್ಥರು ಹಾಗೂ ಯುವತಿ ಕುಟುಂಬಸ್ಥರ ನಡುವೆ ಗಲಾಟೆ ನಡೆದು ವೈಷಮ್ಯಕ್ಕೆ ಕಾರಣವಾಗಿತ್ತು. ಇದೇ ಸೇಡಿನ ಜ್ವಾಲೆಯು ಇಂದು ಸೇಡಿನ ಕಿಡಿಯಾಗಿ ಹೊತ್ತಿಕೊಂಡು ದಲಿತರ ಕೇರಿಗೆ ಹರಿಯುವ ಕುಡಿಯವ ನೀರಿಗೆ ವಿಷ ಹಾಕಲಾಗಿದೆ ಎಂಬುದು ಬಡಾವಣೆಯ ಜನರನ್ನು ಭಯಭೀತರನ್ನಾಗಿ ಮಾಡಿದೆ. ಏನೇ ಆಗಲಿ ವೈಷಮ್ಯಗಳು ಇದ್ದರೆ ಪರಸ್ಪರ ಕುಳಿತು ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳಬೇಕು, ಇಲ್ಲವೆ ಕಾನೂನಿನ ಮೊರೆ ಹೋಗಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಪೂರ್ಣ ದಲಿತ ಕೇರಿಗೆ ವಿಷ ಹಾಕಿದರೆ ಏನು ಅರಿಯದ ಮುಗ್ದ ಮನಸ್ಸಿನ ಮಕ್ಕಳು, ಯಾರ ಸಹವಾಸವು ಬೇಡ ಎಂದು ತಮ್ಮ ಪಾಡಿಗೆ ತಾವಿರುವ ಅಮಾಯಕರ, ವೃದ್ದರ ಸಾವುನೊವ್ವಿಗೆ ಯಾರು ಕೂಡ ಮುಂದಾಗಬಾರದು ಎಂದು ಸಾರ್ವಜನಿಕರ ಅಳಲಾಗಿದೆ.
ಈ ಕುರಿತು ಪೊಲೀಸ್ ಇಲಾಖೆ ಗ್ರಾಮದ ಮೊಕ್ಕಂ ಹೂಡಿ ಎಲ್ಲಾ ತನಿಖೆಗಳನ್ನು ನಡೆಸುತ್ತಿದ್ದು, ಪ್ರಕರಣವನ್ನು ಪತ್ತೆ ಹಚ್ಚಿ ಹಲವರ ಸಾವು ನೊವ್ಬಿಗೆ ಕಾರಣರಾದರವನ್ನು ಬಂಧಿಸಿ ಶಿಕ್ಷೆ ಕೊಡಿಸಿದಾಗ ನೊಂದ ಜೀವಗಳಿಗೆ ನ್ಯಾಯ ದೊರಕಿದಂತಾಗಲಿದೆ.

ಸಾರ್ವಜನಿಕರಿಂದ ರಸ್ತೆ ತಡೆ: ಪ್ರತಿಭಟನೆ
ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ದುರಂತಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ನೊಂದಿರುವ ಜೀವಗಳಿಗೆ ಅನ್ನ, ನೀರು ಕೊಟ್ಟು ಸಮಾಧಾನ ಮಾಡು ವ್ಯವಧಾನ ತೋರುತ್ತಿಲ್ಲ ಎಂದು ಜಿಲ್ಲಾಡಳಿತದ ಹಾಗೂ ಶಾಸಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿದ್ದಾರೆ.
ಬಡಾವಣೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ಶುದ್ದಿಕರಣ ಮಾಡಿ ಜನರಿಗೆ ನೀರು ಪೂರೈಕೆ ಮಾಡಬೇಕಾಗ ಜಿಲ್ಲಾಡಳಿತ ಇದುವರೆಗೂ ಆ ಕೆಲಸ ಮಾಡಿಲ್ಲ. ಬಡಾವಣೆಯ ಜನರು ಯಾವ ಆಹಾರ, ನೀರು ಸೇವನೆ ಮಾಡಬೇಕು. ಯಾವುದರಲ್ಲಿ ವಿಷ ಇದೆಯೋ ಎಂಬ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೂ ಕೂಡ ಜಿಲ್ಲಾಡಳಿತ ಇಲ್ಲಿನ ಜನರಿಗೆ ಧೈರ್ಯ ತುಂಬಿ ಆಹಾರ, ನೀರು ಪೂರೈಕೆ ಮಾಡುವ ಕೆಲಸವನ್ನು ಮಾಡಿಲ್ಲ. ಪ್ರಕರಣ ನಡೆದು ಮೂರು ದಿನಗಳು ಕಳೆದರೂ ಕೂಡ ಸ್ಥಳೀಯ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಇದುವರೆಗೂ ಕೂಡ ಬಡಾವಣೆಗೆ ಭೇಟಿ ನೀಡಿಲ್ಲ. ಇಂತಹ ಜನಪ್ರತಿನಿಧಿಗಳು ನಮಗೆ ಬೇಡ ಎಂದು ಘೋಷಣೆಗಳನ್ನು ಕೂಗಿದ ಸಾರ್ವಜನಿಕರು ರಸ್ತೆ ತಡೆ ನಡೆಸಿದರು.
ಸುಮಾರು ಒಂದು ಗಂಟೆಗಳ ಕಾಲ ರಸ್ತೆ ನಡೆಸಿದ ಸಾರ್ವಜನಿಕರನ್ನು ಪೊಲೀಸರು ಮನಹೊಲಿಸಿ ರಸ್ತೆ ತಡೆಯನ್ನು ತೆರವುಗೊಳಿಸಿದರು.