ಕಲುಷಿತ ನೀರು ಪೂರೈಕೆ ಪ್ರಕರಣ: ಪರಿಸ್ಥಿತಿ ನಿಯಂತ್ರಣಕ್ಕೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜ13: ನಗರದ ರಾಣಿಪೇಟೆಯಲ್ಲಿ ಕಲುಷಿತ ನೀರು ಪೂರೈಕೆಯಿಂದ ಆಸ್ಪತ್ರೆಗೆ ದಾಖಲಾಗುವವ ಸಂಖ್ಯೆ ಗುರುವಾರ ನಿಯಂತ್ರಣಕ್ಕೆ ಬಂದಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಮುಂಜಾಗ್ರತಾ ಕ್ರಮವಾಗಿ ರಾಣಿಪೇಟೆ ಪ್ರದೇಶದಲ್ಲಿ ತಾತ್ಕಾಲಿಕ ಆಸ್ಪತ್ರೆ ಆರಂಭಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು, ಮನೆ ಮನೆ ಸಮೀಕ್ಷೆ ನಡೆಸಿ, ಔಷಧೋಪಚಾರ ನೀಡುವ ಮೂಲಕ ತ್ರೀವ ನಿಗಾವಹಿಸಿದ್ದಾರೆ.  ಗುರುವಾರ ಸುಮಾರು 19 ಜನರು ವಾಂತಿ ಬೇಧಿಯಿಂದಾಗಿ ಕ್ಲಿನಿಕ್‍ಗೆ ಆಗಮಿಸಿದ್ದು, ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಆರು ಜನರನ್ನು 100 ಬೆಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಅವರೊಂದಿಗೆ 16 ಜನರು ಸಾಮಾನ್ಯ ಜ್ವರ ಮತ್ತಿತರೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಂಡರು.
ಕಲುಷಿತ ನೀರು ಸೇವನೆಯಿಂದಾಗಿ ಕಳೆದ ಭಾನುವಾರದಿಂದ ಬಡಾವಣೆಯ ಅನೇಕರಿಗೆ ವಾಂತಿ- ಭೇದಿ ಕಾಣಿಸಿಕೊಂಡಿದ್ದು, ಜ್ವರ ಮತ್ತಿತರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ರಾಣಿಪೇಟೆಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ಆರಂಭಿಸಿದೆ. ಇಬ್ಬರು ವೈದ್ಯರು ಸೇರಿದಂತೆ 15 ಜನ ಸಿಬ್ಬಂದಿಯನ್ನು ನೇಮಿಸಿ, ವೈದ್ಯಕೀಯ ಸೇವೆ ಒದಗಿಸುತ್ತಿದೆ. ಜತೆಗೆ ಪ್ರತಿ ಮನೆಯ ಸದಸ್ಯರ ಆರೋಗ್ಯ ಸ್ಥಿತಿ ಅವಲೋಕಿಸಲು 50 ಜನ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಿದೆ. ಜನರ ಆರೋಗ್ಯ ದೃಷ್ಟಿಯಿಂದ ನಗರಸಭೆ ಟ್ಯಾಂಕರ್‍ಗಳಲ್ಲಿ ಮನೆ ಮನೆಗೆ ಶುದ್ಧ ನೀರು ಪೂರೈಕೆ ಮಾಡಲಾಗುತ್ತಿದೆ.
ನಗರದ ರಾಣಿಪೇಟೆ ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿ, ಸಾರ್ವಜನಿಕರು ಅಸ್ವಸ್ಥಗೊಂಡು ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಇಬ್ಬರು ಹಾಗೂ ನಗರಸಭೆಯ ಮೂವರಿಗೆ ಸೇರಿ ಒಟ್ಟು ಐವರಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಕಾರಣ ಕೇಳಿ ಗುರುವಾರ ನೋಟಿಸ್ ಜಾರಿ ಮಾಡಿದ್ದಾರೆ.
ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ, ಕೆ.ಯು.ಐ.ಡಿ.ಎಫ್.ಸಿ ಸಹಾಯಕ ಕಾರ್ಯಪಾಲಕ ಅಭಿಯಂತರ, ನೀರು ಸರಬರಾಜು ಶಾಖೆಯ ಕಿರಿಯ ಅಭಿಯಂತರರಿಗೆ ಕರ್ತವ್ಯಲೋಪವೆಸಗಿರುವ ಕುರಿತು ನೋಟಿಸ್ ಜಾರಿ ಮಾಡಲಾಗಿದೆ.
ಹೊಸಪೇಟೆ ನಗರದಲ್ಲಿ ಅಶುದ್ಧ ನೀರು ಪೂರೈಕೆಯಾಗಿ ಇಲ್ಲಿನ ರಾಣಿಪೇಟೆ ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿ 40ಕ್ಕೂ ಹೆಚ್ಚಿನ ಜನರು ಅಸ್ವಸ್ಥಗೊಂಡಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ವಿಪತ್ತುಗಳು ಸಂಭವಿಸಿದಾಗ ಮೇಲಧಿಕಾರಿಗಳು, ಜಿಲ್ಲಾಡಳಿತದ ಗಮನಕ್ಕೆ ತರುವುದು ಸಕ್ಷಮ ಪ್ರಾಧಿಕಾರದ ಕರ್ತವ್ಯವಾಗಿದ್ದು, ಈ ಕುರಿತು ಸಕಾಲಕ್ಕೆ ಯಾವುದೇ ಮಾಹಿತಿ ನೀಡದೇ ಜಿಲ್ಲಾಡಳಿತಕ್ಕೆ ಮುಜುಗರ ಉಂಟು ಮಾಡಿರುವುದಲ್ಲದೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ನಿಯಮಗಳನ್ನು ಉಲ್ಲಂಘನೆ ಮಾಡಿ, ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಕಾರಣ ತಮ್ಮ ಮೇಲಿನ ಆರೋಪಗಳ ಬಗ್ಗೆ 24 ಗಂಟೆಯೊಳಗಾಗಿ ಲಿಖಿತ ಸಮಜಾಯಿಸಿಯನ್ನು ಸಲ್ಲಿಸಲು ನೋಟಿಸ್ ಜಾರಿ ಮಾಡಿದ್ದು, ತಪ್ಪಿದಲ್ಲಿ ತಮ್ಮ ಮೇಲಿನ ಆರೋಪಗಳ ಬಗ್ಗೆ ತಾವು ಹೇಳುವುದು ಏನೂ ಇಲ್ಲವೆಂದು ಪರಿಗಣಿಸಿ, ಸೇವಾ ನಿಯಮಗಳ ಅನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.