ಕಲುಷಿತ ನೀರು ಪೂರೈಕೆ ಪ್ರಕರಣ:ಲೋಕಾಯುಕ್ತ ಎಸ್ಪಿ ಭೇಟಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಜ14: ನಗರದ ರಾಣಿಪೇಟೆಯಲ್ಲಿ ಕಲುಷಿತ ನೀರು ಸೇವಿಸಿ, ಓರ್ವ ಮಹಿಳೆ ಸಾವನ್ನಪ್ಪಿ ಹಲವರು ಅಸ್ಪಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಲೋಕಾಯುಕ್ತ ಎಸ್ಪಿ ಪುರುಷೋತ್ತಮ ಅವರು, ಶುಕ್ರವಾರ ಸ್ಥಳೀಯ ಸರ್ಕಾರಿ ಸಾರ್ವಜನಿಕ ನೂರು ಹಾಸಿಗೆ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ಮೊದಲು ರಾಣಿಪೇಟೆ ಪ್ರದೇಶಕ್ಕೆ ಭೇಟಿ ನೀಡಿ, ಕುಡಿಯುವ ನೀರು ಪೂರೈಕೆ ಕುರಿತು ಸ್ಥಳೀಯರಿಂದ ಮಾಹಿತಿ ದಾಖಲಿಸಿಕೊಂಡು, ನೀರಿನ ಮಾದರಿ ಸಂಗ್ರಹಿಸಿದರು. ಬಳಿಕ ಕಲುಷಿತ ನೀರು ಸೇವನೆಯಿಂದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಹೇಳಿಕೆಯನ್ನು ದಾಖಲಿಸಿಕೊಂಡರು.
ಲೋಕಾಯುಕ್ತ ಎಸ್ಪಿ ಪುರುಷೋತ್ತಮ, 5ನೇ ವಾರ್ಡ್ ವ್ಯಾಪ್ತಿಯ ರಾಣಿಪೇಟೆಯ ವಿವಿಧೆಡೆ ನೀರಿನ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ರವಾನಿಸುತ್ತೇವೆ. ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳ ಕರ್ತವ್ಯಲೋಪ ಎದ್ದು ಕಾಣುತ್ತಿದೆ. ಈ ಕುರಿತು  ಸ್ವಯಂ ಪ್ರೇರಿತ ದೂರು ದಾಖಲಸಿಕೊಳ್ಳಲಾಗುವುದು ಎಂದು ತಿಳಿಸಿದರು. ಡಾ.ಹರಿಪ್ರಸಾದ್, ಡಾ. ಸೋಮಶೇಖರ ಇತರರು ಹಾಜರಿದ್ದರು.