ಕಲುಷಿತ ನೀರು ಪೂರೈಕೆಗೆ ಆಕ್ರೋಶ

ಕೋಲಾರ,ಜೂ.೨೦- ಸೂಲೂರು ಗ್ರಾಮ ಪಂಚಾಯತಿ ಗರುಡನಹಳ್ಳಿ ಗ್ರಾಮದ ನಿವಾಸಿ ಮುರಳೀಧರ ಅವರ ಮನೆಯ ತೊಟ್ಟಿಗೆ ೧೫ ದಿನದಿಂದ ಚರಂಡಿ ನೀರು ಮತ್ತು ಪಿಟ್ ನೀರು ಕನೆಕ್ಟ್ ಆಗಿ ಬರುತ್ತಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷ, ಪಿಡಿಓ, ಇಓ, ಸಿ.ಇ.ಓ ಅವರಿಗೆ ಮನವಿ ನೀಡಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮುರಳೀಧರ ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಪಂಚಾಯತಿ ವತಿಯಿಂದ ಹೊಸ ನೀರಿನ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಸಂದರ್ಭದಲ್ಲಿ ಕಾರ್ಮಿಕರು ಅನಾಹುತದಿಂದ ನಮ್ಮ ಮನೆ ನೀರಿನ ಪೈಪ್ ಮತ್ತು ಪಕ್ಕದ ಮನೆಯವರ ಫಿಟ್ ಪೈಪ್ ಹೊಡೆದು ಹೋಗಿರುವ ಕಾರಣ ನೀರಿನ ತೊಟ್ಟಿಗೆ ಚರಂಡಿ ನೀರು ಪಿಟ್ ನೀರು ಕನೆಕ್ಟ್ ಆಗಿ ಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದು, ಏನೂ ಪ್ರಯೋಜನವಾಗಿರುವುದಿಲ್ಲ. ಪಿಡಿಓ ಮತ್ತು ಅಧ್ಯಕ್ಷರ ಗಮನಕ್ಕೆ ತಂದಿದ್ದರೂ ಸಹ ಅವರು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಿ ಕಲುಷಿತ ಗಲೀಜು ನೀರು ತೊಟ್ಟಿಗೆ ಬರದಂತೆ ಕ್ರಮ ಕೈಗೊಳ್ಳಬೇಕೆಂದು ಮುರಳೀಧರ ಅವರು ಒತ್ತಾಯಿಸಿದ್ದಾರೆ.