ಕಲುಷಿತ ನೀರು: ಪರಿಣಿತರ ತಂಡ ರಚನೆಗೆ ಆಗ್ರಹ

ಬೆಂಗಳೂರು,ಮೇ೨೯:ರಾಜ್ಯದ ಜೀವನದಿ ಕಾವೇರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂಬ ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಅನಾಹುತ ತಡೆಯಲು ತಾಂತ್ರಿಕ ಪರಿಣಿತರ ತನಿಖಾ ತಂಡವನ್ನು ರಚನೆ ಮಾಡುವಂತೆ ವಿಧಾನಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರಿಗೆ ಪತ್ರ ಬರೆದಿರುವ ಅವರು, ಕಾವೇರಿ ನದಿನೀರು ಕಲುಷಿತವಾಗುತ್ತಿರುವುದು ಕಳವಳದ ಸಂಗತಿ. ತುರ್ತಾಗಿ ಈಕಡೆ ಗಮನ ಹರಿಸಬೇಕಿದೆ. ಕೂಡಲೇ ತಾಂತ್ರಿಕ ಪರಿಣಿತರ ತನಿಖಾ ತಂಡವನ್ನು ರಚನೆ ಮಾಡಿ ವರದಿ ಪಡೆದು ಸೂಕ್ತಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಈ ಸಮಿತಿಯಲ್ಲಿ ಪರಿಸರ,ಕೈಗಾರಿಕೆ, ನೀರಾವರಿ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ತಜ್ಞರ ಸಮಿತಿಯನ್ನು ರಚನೆ ಮಾಡಬೇಕು. ಈ ಸಮಿತಿ ಕೂಲಂಕುಷವಾಗಿ ಅಧ್ಯಯನಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ವರದಿಯಾಧರಿಸಿ ಸರ್ಕಾರ ಮುಂದಿನ ಕ್ರಮಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.