ಕಲುಷಿತ ನೀರು, ಆಹಾರ,ಆರೋಗ್ಯದ ಮೇಲೆ ದುಷ್ಪರಿಣಾಮ

ಚನ್ನಪಟ್ಟಣ.ಜೂ೨:ನಾವು ಸೇವಿಸುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರವೆಲ್ಲಾ ಕಲುಷಿತಕೊಂಡಿರುವುದರಿಂದಲೇ ಮನುಷ್ಯನ ಮೇಲೆ ಹಲವಾರು ರೀತಿಯ ದುಷ್ಪರಿಣಾಮಗಳು ಬೀರಲು ಕಾರಣವಾಗಿದೆ ಎಂದು ನಗರದ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕಿಲರ ಸಂಘ,ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಎಲ್ಲಾ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಅತಿ ಮುಖ್ಯವಾಗಿದ್ದು, ಆರೋಗ್ಯ ಸಂಪತ್ತು ನಿಮ್ಮ ಬಳಿ ಇದ್ದರೇ ನಮ್ಮಂತ ಪುಣ್ಯವಂತರು ಯಾರು ಇಲ್ಲ ಎಂದೇ ತಿಳಿಯಬೇಕು, ತಂಬಾಕು ಸೇವನೆಯಿಂದ ಮನುಷ್ಯನ ಮೇಲೆ ಮಾರಾಣಾಂತಿಕ ಪರಿಣಾಮ ಬೀರುತ್ತಿದ್ದು,ತಂಬಾಕು ಸೇವೆನೆ ಕೇವಲ ಕ್ಷಣಿಕ ಸುಖ ನೀಡಿ, ಆತನನ್ನು ಸಾವಿನ ಹಾದಿಯಲ್ಲಿ ತಂದು ನಿಲ್ಲಿಸುವ ಒಂದು ಕೆಟ್ಟ ಚಟವಾಗಿದ್ದು, ಈ ನಿಟ್ಟಿನಲ್ಲಿ ತಂಬಾಕು ಸೇವೆನೆಯ ನಿರ್ಭಂಧ ಹಾಗೂ ಕಾನೂನುಗಳ ಬಗ್ಗೆ ಪ್ರತಿಯೊಬ್ಬರು ಎಚ್ಚರವಹಿಸುವುದು ಅವಶ್ಯಕವಾಗಿದ ಎಂದರು.
ದೇಶದಲ್ಲಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವುವರು ಹಾಗೂ ಸಾವಿನ ಸಂಖ್ಯೆಯನ್ನು ಗಮನಸಿದರೆ ಕಳವಳಕಾರಿಯಾಗಿದ್ದು, ಸಿಗರೇಟ್ ಸುಡುತ್ತಾ ಮನುಷ್ಯನಿಗೆ ಆನಂದ ನೀಡುವುದರ ಜೊತೆಯಲ್ಲೇ ಆತನನ್ನೇ ಸುಡುವುದನ್ನು ಮೊದಲು ಅರಿತುಕೊಳ್ಳಬೇಕು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಂಬಾಕು ನಿಷೇಧದ ಬಗ್ಗೆ ಹಲವಾರು ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದು, ಪ್ರತಿಯೊಬ್ಬರ ಈ ವಿಚಾರದಲ್ಲಿ ಎಚ್ಚರಿಕೆ ಅವಶ್ಯಕವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮಹೇಂದ್ರ ಎಂ ಮಾತನಾಡಿ, ತಂಬಾಕು ಸೇವನೆಯಿಂದ ಸೇವೆನೆ ಮಾಡುವ ವ್ಯಕ್ತಿಗಿಂತ ಆತನ ಸುತ್ತಮುತ್ತ ಇರುವ ಸಾರ್ವಜನಿಕರಿಗೂ ಇದು ಮಾರಕವಾಗಿದ್ದು,ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವೆನೆ ಮಾಡುವುದು ಅಪರಾಧವಾಗಿದ್ದು, ಈ ನಿಟ್ಟಿನಲ್ಲಿ ಈಂತಹವರ ಮೇಲೆ ಕ್ರಮಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಅಫರ ಸಿವಿಲ್ ನ್ಯಾಯಾಧೀಶರಾದ ಉಷಾರಾಣಿ, ನ್ಯಾಯಾಲಯದ ಸರ್ಕಾರಿ ಅಭಿಯೋಜಕ ವೀರಭದ್ರಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜು ಹಾಗೂ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ವಿಜಯನರಸಿಂಹ ಮಾತನಾಡಿ ತಂಬಾಕು ಸೇವನೆಯ ಬಗ್ಗೆ ಹಲವಾರು ಮಾಹಿತಿ ಹಾಗೂ ಎಚ್ಚರಿಕೆ ನೀಡಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬೋಜೇಗೌಡ, ಸಾರ್ವಜನಿಕ ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ಅಧಿಕಾರಿ ವೇದಮೂರ್ತಿ,ಡಾ. ರಾಜ್‌ಕುಮಾರ್, ಡಾ. ಅಮರೀಶ್, ಸಾರ್ವಜನಿಕ ಆಸ್ಪತ್ರೆಯ ನರ್ಸ್ ಸೂಪರಿಡೆಂಟ್ ಸರಸ್ವತಿ, ಹಿರಿಯ ಆರೋಗ್ಯಾಧಿಕಾರಿ ಅಕ್ಕೂರು ಪ್ರಸಾದ್,ಆನಂದ್,ಪ್ರಕಾಶ್, ಹಾಗೂ ಹಲವಾರು ಮಂದಿ ಮುಖಂಡರು ಹಾಜರಿದ್ದರು.