ಕಲುಬುರಗಿಯಲ್ಲಿ ಪಿಸಿಎಂ ಪ್ರತ್ಯಕ್ಷ

ಕಲ್ಬುರ್ಗಿ, ನ. ೧೪- ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಾಕಷ್ಟು ಸದ್ದು ಮಾಡಿದ್ದ ಪೇಸಿಎಂ ಪೋಸ್ಟರ್‌ಗಳು ಕಲ್ಬುರ್ಗಿ ನಗರದ ಹಲವೆಡೆ ಇಂದು ಪ್ರತ್ಯಕ್ಷವಾಗಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲ್ಬುರ್ಗಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕ್ಯೂಆರ್ ಕೋಡ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಇರುವ ಪೇಸಿಎಂ ಪೋಸ್ಟರ್‌ಗಳನ್ನು ಕಲ್ಬುರ್ಗಿ ನಗರದ ಹಲವೆಡೆ ಅಂಟಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಲ್ಬುರ್ಗಿ ತಾಲ್ಲೂಕಿನ ಮಡಿಯಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ದಿನಾಚರಣೆ ಹಾಗೂ ವಿವೇಕ ಯೋಜನೆಯಡಿ ಶಾಲಾ ಕೊಠಡಿಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿ ಸೇಡಂ ಪಟ್ಟಣದಲ್ಲಿ ೬೯ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆಗೆ ಇಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಕಲ್ಬುರ್ಗಿಯ ಸಂಗಮೇಶ್ವರ ಕಾಲೋನಿ, ಟ್ಯಾಂಕ್ ಬಂಡ್ ರಸ್ತೆ ಸೇರಿದಂತೆ ಅನೇಕ ಕಡೆ ಗೋಡೆಗಳ ಮೇಲೆ ಪೇಸಿಎಂ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.
ಈ ಪೇಸಿಎಂ ಪೋಸ್ಟರ್‌ಗಳು ಬೆಂಗಳೂರಿನಲ್ಲಿ ಗೋಡೆಗಳ ಮೇಲೆ ಅಂಟಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ದೊಡ್ಡ ಮಟ್ಟದ ವಾಕ್ಸಮರ ನಡೆದು ಪೋಸ್ಟರ್ ಅಂಟಿಸಿದ್ದವರ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು.
ಈಗ ಕಲ್ಬುರ್ಗಿಯಲ್ಲಿ ಮತ್ತೆ ಪೇಸಿಎಂ ಪೋಸ್ಟರ್‌ಗಳು ರಾರಾಜಿಸಿವೆ.
ಇತ್ತೀಚೆಗೆ ಸಿದ್ದಾಪುರ ಪಟ್ಟಣದಲ್ಲಿ ಶಾಸಕ ಪ್ರಿಯಾಂಕ ಖರ್ಗೆ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಈಗ ಕಾಂಗ್ರೆಸ್ ಕಾರ್ಯಕರ್ತರು ಪೇಸಿಎಂ ಪೋಸ್ಟರ್ ಅಂಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.