ಕಲಿಸುವದಕ್ಕಾಗಿ ಬದುಕುವ ಶಿಕ್ಷಕರ ಸಂಖ್ಯೆ ವೃದ್ಧಿಯಾಗಲಿ

ಕಲಬುರಗಿ: ಆ.20: ಪರಿಣಾಮಕಾರಿ ಬೋಧನೆ, ವಿದ್ಯಾರ್ಥಿಗಳಲ್ಲಿ ದೇವರನ್ನು ಕಾಣುವ ಪ್ರವೃತ್ತಿ ಹೊಂದಿ ಸೇವೆ ಸಲ್ಲಿಸುವ, ವಿದ್ಯೆಯ ಜೊತೆ ಬುದ್ದಿ, ಮಾನವೀಯ ಮೌಲ್ಯಗಳನ್ನು ಬಿತ್ತುವ, ಬದ್ದತೆಯಿಂದ ಕಾರ್ಯನಿರ್ವಹಿಸುವ ಶಿಕ್ಷಕರು ಆದರ್ಶರಾಗುತ್ತಾರೆ. ಬದುಕುವುದಕ್ಕಾಗಿ ಕಲಿಸುವುದಲ್ಲ. ಬದಲಿಗೆ ಕಲಿಸುವುದಕ್ಕಾಗಿ ಬದುಕುವ ಶಿಕ್ಷಕರ ಸಂಖ್ಯೆ ಪ್ರಸ್ತುತ ದಿನಗಳಲ್ಲಿ ವೃದ್ಧಿಯಾಗಬೇಕಾಗಿದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಆಶಯ ವ್ಯಕ್ತಪಡಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯ ಉಪಾಧ್ಯಕ್ಷರಾಗಿ ನಾಮನಿರ್ದೇಶನ ಹೊಂದಿರುವ ವೇದಮೂರ್ತಿ ನೀಲಕಂಠಯ್ಯ ಹಿರೇಮಠ ಮತ್ತು ನೂತನ ಜಿಲ್ಲಾ ಉಪಾಧ್ಯಕರಾಗಿ ಆಯ್ಕೆಯಾದ ಪರಮೇಶ್ವರ ಬಿ.ದೇಸಾಯಿ ಅವರಿಗೆ ‘ಬಸವೇಶ್ವರ ಸಮಾಜ ಸೇವ ಬಳಗ’ದ ವತಿಯಿಂದ ನಗರದ ಖಾಸಗಿ ಹೊಟೆಲ್‍ನಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಕರು ತಮ್ಮ ಬೋಧನಾ ಕಾರ್ಯದಿಂದ ಯಾವತ್ತು ವಿಚಲಿತರಾಗಬಾರದು. ಶಿಕ್ಷಣ ಪಡೆದವರೆಲ್ಲರು ಶಿಕ್ಷಕರಾದರೆ ದೇಶ ಅಭಿವೃದ್ಧಿ ಹೊಂದುವುದಿಲ್ಲ. ಬದಲಿಗೆ ಶಿಕ್ಷಕರಾಗಬೇಕು, ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು ಎಂಬ ಪರಮ ಧ್ಯೇಯವನ್ನು ಹೊಂದಿರುವ ಶಿಕ್ಷಕರಿಂದ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯವಿದೆ. ನೂತನ ಉಪಾಧ್ಯಕ್ಷರುಗಳು ರಾಜ್ಯ, ಜಿಲ್ಲೆಯಲ್ಲಿರುವ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯ್ನಿಸಿ. ಪ್ರತಿಭಾವಂತ ಶಿಕ್ಷಕರನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸುವ ಕಾರ್ಯಮಾಡಿ. ರಾಜಕೀಯ, ದುಶ್ಚಟಗಳಿಂದ ದೂರವಿರಿ. ಸಮಾಜ ಸೇವೆಯಲ್ಲಿ ತೊಡಗುವ ಮೂಲಕ ಸಮಾಜಕ್ಕೆ ಕೂಡಾ ಗುರುವಾಗಬೇಕು ಎಂದು ಅನೇಕ ಸಲಹೆ-ಸೂಚನಗೆಳನ್ನು ನೀಡಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯ ಉಪಾಧ್ಯಕ್ಷ ವೇದಮೂರ್ತಿ ನೀಲಕಂಠಯ್ಯ ಹಿರೇಮಠ, ಜಿಲ್ಲಾ ಉಪಾಧ್ಯಕ್ಷ ಪರಮೇಶ್ವರ ಬಿ.ದೇಸಾಯಿ, ಕಳೆದ ಅನೇಕ ವರ್ಷಗಳಿಂದ ಶಿಕ್ಷಕರ ಸಂಘಟನೆಯ ಮೂಲಕ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ. ನಮ್ಮನ್ನು ಉಪಾಧ್ಯಕ್ಷರನ್ನಾಗಿಸುವ ಮೂಲಕ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು, ಅದಕ್ಕೆ ಪೂರಕವಾಗಿ ಕಾರ್ಯಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಬು ಮೌರ್ಯ, ದಕ್ಷಿಣ ವಲಯ ಪ್ರಧಾನ ಕಾರ್ಯದರ್ಶಿ ನವನಾಥ ಸಿಂಧೆ, ಸರ್ಕಾರಿ ನೌಕರರ ಗೃಹ ನಿರ್ಮಾಣ ಮಂಡಳಿಯ ಉಪಾಧ್ಯಕ್ಷ ಚನ್ನವೀರಯ್ಯ ಮಠಪತಿ, ಉತ್ತರ ವಲಯ ಕಸಾಪ ಅಧ್ಯಕ್ಷ ಪ್ರಭುಲಿಂಗ ಮುಲಗೆ, ದಕ್ಷಿಣ ವಲಯ ಕಜಾಪ ಕಾರ್ಯದರ್ಶಿ ಸಿದ್ದರಾಮ ತಳವಾರ ವೇದಿಕೆ ಮೇಲಿದ್ದರು. ಅನೇಕ ಸಂಖ್ಯೆಯಲ್ಲಿ ಶಿಕ್ಷಕರು, ಮತ್ತಿತರರು ಭಾಗವಹಿಸಿದ್ದರು.
ಬಸಯ್ಯಸ್ವಾಮಿ ಹೊದಲೂರ ಪ್ರಾರ್ಥಿಸಿದರು. ನರಸಪ್ಪ ಬಿರಾದಾರ ದೇಗಾಂವ ಸ್ವಾಗತಿಸಿದರು. ವೀರೇಶ ಬೋಳಶೆಟ್ಟಿ ನರೋಣಾ ನಿರೂಪಿಸಿ, ವಂದಿಸಿದರು.