ಕಲಿಯುಗದ ಕನ್ಯೆ ನನಗೆ ಹಾಸ್ಯ ನಟನಾಗಿಸಿತು: ಅಲ್ದಾಳ್ ಅಗಲಿಕೆಗೆ ಅಲ್ಲಮಪ್ರಭು ಪಾಟೀಲ್ ಕಂಬನಿ

ಕಲಬುರಗಿ:ಎ.13: ಹಿರಿಯ ರಂಗಕರ್ಮಿ ಲಾಲ್ ಮೊಹ್ಮದ್ ಬಂದೇನವಾಜ್ ಖಲೀಪ್ (ಎಲ್.ಬಿ.ಕೆ. ಅಲ್ದಾಳ್ ಅವರ ನಿಧನವು ಜಿಲ್ಲೆಯ ಕಲೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾಗದ ನಷ್ಟವುಂಟು ಮಾಡಿದೆ ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಲ್ಲಮಪ್ರಭು ಪಾಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದರು.
ಎಲ್.ಬಿ.ಕೆ. ಅಲ್ದಾಳ್ ಅವರು ಅನೇಕ ನಾಟಕಗಳನ್ನು ಬರೆದರು. ಅದರಲ್ಲಿ 1972ರಲ್ಲಿ ಅವರು ಬರೆದ ಕಲಿಯುಗದ ಕನ್ಯೆ ನಾಟಕವನ್ನು ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿಯಲ್ಲಿ ಪ್ರದರ್ಶನಗೊಳ್ಳಲಾಯಿತು. ಆಗಷ್ಟೇ ಪ್ರಥಮ ಬಾರಿಗೆ ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರು ನಾಟಕವನ್ನು ಉದ್ಘಾಟಿಸಿದರು. ನಾನು ಆ ನಾಟಕದಲ್ಲಿ ಹಾಸ್ಯನಟನಾಗಿ ದರ್ಜಿಯಾಗಿ (ಸಿಂಪಿಗ)ನಾಗಿ ಅಭಿನಯಿಸಿದೆ. ನಾಟಕದ ನಾಯಕ ನೆಲೋಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಬೈಲಪ್ಪ ನೇದಲಗಿ ಅವರು ಮಾಡಿದ್ದರು ಎಂದು ಅವರು ಅಲ್ದಾಳ್ ಅವರ ಸೇವೆಯನ್ನು ವೈಯಕ್ತಿಕವಾಗಿ ಸ್ಮರಿಸಿದರು.
ಎಲ್.ಬಿ.ಕೆ. ಅಲ್ದಾಳ್ ಅವರಲ್ಲಿ ಕಲೆ ಹಾಗೂ ಸಾಹಿತ್ಯ ರಕ್ತಗತವಾಗಿತ್ತು. ಹಾಗಾಗಿ ಅವರಿಗೆ ಕರ್ನಾಟಕ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವಕ್ಕೆ ಆಯ್ಕೆ ಮಾಡುವಲ್ಲಿಯೂ ಸಹ ನಾವು ಯಶಸ್ವಿಯಾದೆವು ಎಂದು ಅವರು ಹೇಳಿದರು.
ಕೇವಲ ಏಳನೇ ತರಗತಿಯನ್ನು ಓದಿದ್ದರೂ ಸಹ 85ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದರು. ಅವರ ಮೊದಲ ಕೃತಿ ಪತಿಭಕ್ತಿ, ಎರಡನೇ ಕೃತಿ ಕಲಿಯುಗದ ಕನ್ಯೆ. ಆ ಎರಡನೇ ನಾಟಕವನ್ನು ನನ್ನ ಹುಟ್ಟೂರಿನಲ್ಲಿ ಪ್ರದರ್ಶನ ಕಂಡಿದ್ದು ಒಂದು ರೀತಿಯಲ್ಲಿ ಐತಿಹಾಸಿಕ ನಾಟಕವಾಗಿತ್ತು ಎಂದು ಅವರು ಸ್ಮರಿಸಿದರು.
ನಮಸ್ಕಾರ, ಬಾಳಿಗೊಂದು ಬೆಲೆ ಬೇಕು, ನನ್ನ ದೇವರು, ಕಣ್ಣಿಟ್ಟ ಕೈ ಕೊಟ್ಟ, ಜಮಖಂಡಿಯ ಅಯ್ಯಣ್ಣ ಮುತ್ಯಾ, ಭರತನೂರಿನ ಗುರುನಂಜೇಶ್ವರ ಮಹಾತ್ಮೆ, ಋಣ ಮುಟ್ಟಿತು ಛಲ ತೀರಿತು, ಕಡಕೋಳ್ ಮಡಿವಾಳೇಶ್ವರರು, ಶ್ರೀ ವಿಶ್ವಾರಾಧ್ಯ ಮಹಾತ್ಮೆ, ಗರತಿ ವಿಶ್ವದ ಜ್ಯೋತಿ , ಮೂರು ಮುತ್ತುಗಳು, ಶಹಾಪೂರ ಮಹಾತ್ಮಾ ಚರಬಸವೇಶ್ವರರು, ಜೇವರಗಿ ಜ್ಯೋತಿ ಷಣ್ಮುಖ ಶಿವಯೋಗಿಗಳು, ಅಳ್ಳಳ್ಳಿ ಅಯ್ಯಪ್ಪಯ್ಯ ಮಹಾತ್ಮೆ , ಹಾರಕೂಡದ ಚನ್ನಬಸವ ಶಿವಯೋಗಿಗಳು ,ವಚನ ವಾಹಿನಿ, ಕಲ್ಕಂಬದ ಕಿರಣ, ಶರಣ ಸಿಂಚನ ಸೇರಿದಂತೆ 85ಕ್ಕೂ ಹೆಚ್ಚು ನಾಟಕ ಬರೆದಿದ್ದರು. 10ಕ್ಕೂ ಹೆಚ್ಚು ನಾಮಾವಳಿಗಳನ್ನು ಬರೆದಿದ್ದರು. ಅವರ ನಿಧನವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಹಾಗೂ ಸಾಹಿತ್ಯಾಸಕ್ತರಿಗೆ ಕೊಡಲಿ ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಅಲ್ಲಮಪ್ರಭು ಪಾಟೀಲ್ ಅವರು ಪ್ರಾರ್ಥಿಸಿದ್ದಾರೆ.