ಕಲಿಕೆ ಸಂತೋಷ ತರಬೇಕು, ಒತ್ತಡವಲ್ಲ:ಕುಲಪತಿ 


(ಸಂಜೆವಾಣಿ ಪ್ರತಿನಿಧಿಯಿಂದ)
ಹೊಸಪೇಟೆ, ಜು.09:  “ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಹಾಗೂ ಶೈಕ್ಷಣಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇದೆ. “ಕಲಿಕೆ ಸಂತೋಷ ತರಬೇಕು, ಒತ್ತಡವಲ್ಲ“  ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಿನ್ನೆ ನಡೆದ ಪದವಿ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ವಿದ್ಯಾಭ್ಯಾಸ, ಕೌಟುಂಬಿಕ, ಸಾಮಾಜಿಕ ಹಾಗೂ ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರಲ್ಲಿ ಒತ್ತಡಕ್ಕೆ ಸಿಲುಕಿ ವಿದ್ಯಾರ್ಥಿ ಜೀವನದ ಸಂತೋಷವನ್ನು ಕಳೆದುಕೊಂಡಿದ್ದಾರೆ. ದೇಶದ ಎಲ್ಲ ಸಮಸ್ಯೆ ನಮ್ಮ ಮೇಲೆ ಇದೆ ಎಂದು ಭಾವಿಸಿ ಗಂಭೀರ ಸ್ಥಿತಿಯನ್ನು ತಲುಪುತ್ತಿದ್ದಾರೆ. ಕಲಿಕಾ ಪಠ್ಯಕ್ರಮಗಳು ವಿದ್ಯಾರ್ಥಿಗಳಿಗೆ ಇಚ್ಚೆ ಇಲ್ಲದಿದ್ದರೂ ಒತ್ತಾಯ ಪೂರ್ವಕ ವಿಷಯಗಳನ್ನು ಕಲಿಯಬೇಕಾಗುತ್ತದೆ. ಹೊಸದಾಗಿ ಅಳವಡಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ  ಮುಕ್ತವಾಗಿ ವಿಷಯಗಳ ಆಯ್ಕೆಗೆ ಮತ್ತು ವೈವಿದ್ಯಮಯ, ಅಂತರ ಸಾಂಸ್ಕೃತಿಕ ಕಲಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ತಾಂತ್ರಿಕ ಶಿಕ್ಷಣ ಪಡೆಯುತ್ತಲೇ ಸಂಗೀತ, ನೃತ್ಯದಂತಹ ಕಲಾತ್ಮಕ ಕಲಿಕೆಗೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆ ಸುಗಮವಾಗಲಿದೆ. ಇಷ್ಟಪಟ್ಟು ಹಾಗೂ ಕಷ್ಟಪಟ್ಟು ಗಳಿಸಿದ ವಿದ್ಯೆ ಸಮಾಜಕ್ಕೆ ಉಪಯೋಗವಾಗಲಿ” ಎಂದು ಹಾರೈಸಿದರು. 
ಈ ಸಂದರ್ಭದಲ್ಲಿ ಅವರು ನೂತನ ಪದವಿಧರರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು ಹಾಗೂ ಅವರಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಿದರು.
 ಟಿ.ಬಿ.ಡ್ಯಾಮ್ ನ ತುಂಗಭದ್ರಾ ಮಂಡಳಿಯ ಕಾರ್ಯದರ್ಶಿಗಳಾದ ಜಿ. ನಾಗಮೋಹನ್  ಅವರು ಮಾತನಾಡಿ, ”ಭರದಿಂದ ಬದಲಾಗುವ ತಾಂತ್ರಿಕತೆಗೆ ಅನುಗುಣವಾಗಿ ವಿದ್ಯಾರ್ಥಿಗಳು ಸದಾಕಾಲ ತಮ್ಮನ್ನು ತಾವು ಅಣಿಗೊಳಿಸಬೇಕಾದ ಅವಶ್ಯಕತೆ ಇದೆ. ತಮ್ಮಲ್ಲಿ ಅಡಗಿದ ಶಕ್ತಿಯನ್ನು ಅರಿತು ಹೊಸ ತಾಂತ್ರಿಕತೆಯ ಕಡೆಗೆ ಹೆಜ್ಜೆ ಹಾಕಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅಭಿಪ್ರಾಯಪಟ್ಟರು.
 2021-22 ರ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎರಡನೇ ಱ್ಯಾಂಕ್  ಪಡೆದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಕು. ಕೆ ವಿಸ್ಮಯಗೆ  ಸನ್ಮಾನಿಸಲಾಯಿತು. 
ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಗುರಿಯ ಕೊರತೆ ಎದ್ದು ಕಾಣುತ್ತಿದೆ. ವಿದ್ಯಾರ್ಥಿಗಳು ಯಾವುದೇ ಆಕರ್ಷಣೆಗೆ ಒಳಗಾಗದೆ ತಮ್ಮ ಗುರಿ ಸಾಧನೆಯತ್ತ ಪ್ರಯತ್ನ ನಡೆಸಬೇಕು ಎಂದು ವಿದ್ಯಾರ್ಥಿಗಳಿಗೆ ಅಧ್ಯಕ್ಷೀಯ ನುಡಿಗಳನ್ನು ಹೇಳಿದರು.
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರೋಹಿತ್ ಯು.ಎಂ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕರಾದ ಡಾ.ಕೆ.ಶರಣಬಸಮ್ಮ ಅತಿಥಿಗಳನ್ನು ಪರಿಚಯಿಸಿದರು. ಈ ಸಮಾರಂಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಜ್ಯೋತಿ ಮಹಾಬಲೇಶ್ವರ, ಶ್ರೀ ಹೆಚ್. ಎಚ್ ಎಂ ಉದಯ ಶಂಕರ್ ಹಾಗೂ ವಿವಿಧ ತಾಂತ್ರಿಕ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ಸಮಾರಂಭದ ಅಂಗವಾಗಿ  ಸ್ಕೌಟ್ಸ್ ಅಂಡ್ ಗೈಡ್ಸ್ ವಾದ್ಯದೊಂದಿಗೆ ಪದವಿ ವಿದ್ಯಾರ್ಥಿಗಳ ಮೆರವಣಿಗೆ  ನಡೆಸಲಾಯಿತು. ಮುಖ್ಯ ಅತಿಥಿಗಳಿಗೆ ಸನ್ಮಾನವನ್ನು ಸಲ್ಲಿಸಲಾಯಿತು. 
6೦೦ಕ್ಕೂ ಹೆಚ್ಚು ಬಿ.ಇ. ಎಂ.ಟೆಕ್., ಹಾಗೂ ಎಂ.ಬಿ.ಎ. ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು ಹಾಗೂ ಅವರ ಪೋಷಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕು.ಶ್ರಾವಣಿ ಹಾಗೂ ತಂಡದವರು ನಾಡಗೀತೆಯೊಂದಿಗೆ ಪ್ರಾರ್ಥಿಸಿದರು, ಡಾ. ನಾಗರಾಜ್ ಎಂ.ಕೆ ವಂದಿಸಿದರು. ಪ್ರೊ. ಮಾಲತೇಶ್ ಕೆ ಹಾಗೂ ಪ್ರೊ. ಇಂದಿರಾ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ. ಶಮಿತಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.