ಕಲಿಕೆ ಪರಿಣಾಮಕಾರಿಯಾಗಲು ಮಾದರಿಗಳು ಪೂರಕ

ಕಲಬುರಗಿ:ಜ.25: ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಸೈದ್ದಾಂತಿಕವಾಗಿ ಬೋಧನೆ ಮಾಡಿದರೆ ಅವರಿಗೆ ನೈಜ ಅನುಭವ ದೊರೆಯಲು ಸಾಧ್ಯವಾಗುವುದಿಲ್ಲ. ಜೊತೆಗೆ ವಿಷಯಗಳನ್ನು ಪ್ರಾಯೋಗಿಕ, ವಸ್ತು ಪ್ರದರ್ಶನ ಹಾಗೂ ಮಾದರಿಗಳು ವಿದ್ಯಾರ್ಥಿಗಳು ಬೇಗನೆ ಅರ್ಥ ಮಾಡಿಕೊಳ್ಳಲು, ದೀರ್ಘಕಾಲ ನೆನಪಿನಲ್ಲಿಡಲು ಹಾಗೂ ಕಲಿಕೆ ಪರಿಣಾಮಕಾರಿಯಾಗಲು ಸಾಧ್ಯವಾಗುತ್ತದೆ ಎಂದು ಗಣಿತ ಉಪನ್ಯಾಸಕಿ ನಯಿಮಾ ನಾಹಿದ್ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಜರುಗಿದ ಗಣಿತ ಮಾದರಿ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದರಿಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ, ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿ, ಕಲಿಕೆಯ ಗುಣಮಟ್ಟ ಹೆಚ್ಚಳವಾಗುತ್ತದೆ. ಪಾಲಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಅಧ್ಯಯನಶೀಲ ಮೈಗೂಡಿಸಿಕೊಂಡಿರಬೇಕು. ವಿದ್ಯಾರ್ಥಿಗಳು ಶಿಕ್ಷಕರು ನೀಡಿದ ಕಾರ್ಯವನ್ನು ತಪ್ಪದೇ ಮಾಡಬೇಕು ಎಂದರು.
ವಿದ್ಯಾರ್ಥಿಗಳಾದ ಉಷಾ ನಾಟಿಕಾರ, ಪುನೀತಕುಮಾರ, ಭಾಗೇಶ್, ವಿಜ್ಞೇಶ್, ಹಾಜರಾ, ಮಿಜ್ಬಾ ಮಾದರಿಗಳನ್ನು ಪ್ರದರ್ಶಿಸಿದರು. ಉಪನ್ಯಾಸಕರಾದ ಶರಣಮ್ಮ ಭಾವಿಕಟ್ಟಿ, ಎಚ್.ಬಿ.ಪಾಟೀಲ, ಮಲ್ಲಪ್ಪ ರಂಜಣಗಿ, ಪ್ರ.ದ.ಸ ನೇಸರ ಎಂ. ಬೀಳಗಿಮಠ ಸೇರಿದಂತೆ ಮತ್ತಿತರರಿದ್ದರು.