ಕಲಿಕೆಯ ಕಿಟ್‍ಗಳ ಉಚಿತ ವಿತರಣೆ

ಧಾರವಾಡ, ಆ.26: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ (ಡಿಮ್ಹಾನ್ಸ್) ಸಂಸ್ಥೆಯಿಂದ ಡಿಮ್ಹಾನ್ಸ್ ಸಭಾಗಂಣದಲ್ಲಿ ಬೌದ್ಧಿಕ ವಿಕಲಚೇತನ ವ್ಯಕ್ತಿಗಳಿಗೆ ಟಿ.ಎಲ್.ಎಮ್.ಕಿಟ್ (ತರಬೇತಿ, ಕಲಿಕಾ, ಸಾಮಾಗ್ರಿ)ಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಾವಣಗೆರೆಯ ಸಂಯುಕ್ತ ಪ್ರಾದೇಶಿಕ ಕೇಂದ್ರ (ದಿವ್ಯಾಂಗ ಜನರಿಗಾಗಿ) ದಿಂದ ಸಂಘಟಿಸಿದ ಈ ಕಾರ್ಯಕ್ರಮವು, ಡಿಮ್ಹಾನ್ಸ್ ಧಾರವಾಡ, ಡಿಮ್ಹಾನ್ಸ್‍ನ ಕ್ಲಿನಿಕಲ್ ಸೈಕಾಲಜಿ ವಿಭಾಗ ಮತ್ತು ಸಮುದಾಯ ಆಧಾರಿತ ಆರೋಗ್ಯ ಕಾರ್ಯಕ್ರಮಗಳ ಘಟಕ ಹಾಗೂ ಧಾರವಾಡದ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ (ಎಸ್.ವ್ಹಿ.ವಾಯ್.ಎಮ್) ಅವರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

ಮೊದಲ ದಿನದ ಈ ಕಾರ್ಯಕ್ರಮಕ್ಕೆ ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಮಹೇಶ ದೇಸಾಯಿ ರವರು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು. ತದನಂತರ ಮಾತನಾಡಿ, ಬೌದ್ಧಿಕ ವಿಕಲಚೇತನ ಸಮಸ್ಯೆಯನ್ನು ಹೊಂದಿರುವ ವಿಶೇಷ ಮಕ್ಕಳನ್ನು ಅಥವಾ ವ್ಯಕ್ತಿಗಳ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಗುರುತಿಸಿ ತಜ್ಞ ವೈದ್ಯರ ಮಾರ್ಗದರ್ಶನ ಪಡೆಯಬೇಕು, ಇದರಿಂದ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿದೆಯೆಂದರು. ಸಮುದಾಯದಲ್ಲಿ ಇತರರಂತೆ ಬೌದ್ದಿಕ ಸಾಮಥ್ರ್ಯ ಕಡಿಮೆ ಇರುವವರನ್ನು ಗೌರವದೊಂದಿಗೆ ಕಾಣಬೇಕು. ವಿಕಲಚೇತನ ಮಕ್ಕಳ ಆರೈಕೆಯಲ್ಲಿ ಪಾಲಕರು ತಾಳ್ಮೆ ಕಳೆದುಕೊಳ್ಳಬಾರದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿತರಿಸುವ ಟಿ.ಎಲ್.ಎಮ್.ಕಿಟ್ (ತರಬೇತಿ, ಕಲಿಕಾ, ಸಾಮಾಗ್ರಿ)ಗಳನ್ನು ಸದುಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಮನೋವೈದ್ಯರ ಮಾರ್ಗದರ್ಶನ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.

ಮಕ್ಕಳಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಿದಲ್ಲಿ ಮಕ್ಕಳು ಒಳ್ಳೆಯ ನಾಗರಿಕರಾಗುತ್ತಾರೆ, ವಿಕಲಚೇತನ ಸಮಸ್ಯೆ ಹೊಂದಿರುವ ಅನೇಕ ಜನರು ಕೂಡ ಒಳ್ಳೆಯ ಸಾಧನೆ ಮಾಡಿದ್ದಾರೆಂದು ಅವರು ಮಾಹಿತಿ ನೀಡಿದರು. ಮತ್ತು ಡಿಮ್ಹಾನ್ಸ್ ಸಂಸ್ಥೆಯ ಸಮುದಾಯ ಆಧಾರಿತ ಆರೋಗ್ಯ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದೆಂದರು.

ಧಾರವಾಡ ಜಿಲ್ಲೆಯ ಅಂಗವಿಕಲರ ಕಲ್ಯಾಣ ಅಧಿಕಾರಿ ಜಗದೀಶ ಕೆ. ಅವರು ಮಾತನಾಡಿ, ಸರಕಾರದಿಂದ ಸಿಗುವ ಸೌಲಭ್ಯಗಳ ಪ್ರಯೋಜನಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ದಾವಣಗೆರೆಯ ಸಂಯುಕ್ತ ಪ್ರಾದೇಶಿಕ ಕೆಂದ್ರದ (ದಿವ್ಯಾಂಗ ಜನರಿಗಾಗಿ) ಕ್ಲಿನಿಕಲ್ ಅಸಿಸ್ಟಂಟ್ ಮತ್ತು ಸಂಯೋಜಕ ರಾಜು.ಟಿ. ಅವರು ಟಿ.ಎಲ್.ಎಮ್.ಕಿಟ್ (ತರಬೇತಿ, ಕಲಿಕಾ, ಸಾಮಾಗ್ರಿ) ಗಳ ವಿತರಣೆಯ ಉದ್ಧೇಶಗಳ ಬಗ್ಗೆ ಮಾಹಿತಿ ನೀಡುತ್ತಾ, ವಿಕಲಚೇತನ ಸಮಸ್ಯೆ ಆರಂಭಿಕ ಹಂತದಲ್ಲಿ ಗುರುತಿಸಿ, ಇದಕ್ಕೆ ಬೇಕಾದ ಮಾರ್ಗದರ್ಶನ, ತರಬೇತಿ, ಆಪ್ತಸಮಾಲೋಚನೆ ಪಡೆದುಕೊಳ್ಳಬೇಕೆಂದು ತಿಳಿಸಿದರು. ಮತ್ತು ವಿಕಲಚೇತನ ವ್ಯಕ್ತಿಗಳಿಗೆ ಇರುವ ಸರಕಾರಿ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಧಾರವಾಡದ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್‍ನ ಪ್ರಾದೇಶಿಕ ಮುಖ್ಯಸ್ಥ ಜಯಂತ ಕೆ.ಎಸ್ ಅವರು ಮಾತನಾಡಿ, ಡಿಮ್ಹಾನ್ಸ್ ಸಂಸ್ಥೆಯ ಇಂತಹ ಕಾರ್ಯಕ್ರಮಗಳ ಆಯೋಜನೆ ಬೌದ್ದಿಕ ಸಾಮಥ್ರ್ಯ ಕಡಿಮೆ ಇರುವ ಮಕ್ಕಳು ಅಥವಾ ವ್ಯಕ್ತಿಗಳ ಮುಖದಲ್ಲಿ ಖುಷಿಯನ್ನು ತಂದು, ಇವರ ಜೊತೆ ಇಡೀ ಸಮುದಾಯದ ಬೆಂಬಲವಿದೆ ಎನ್ನುವ ಆಶಾಭಾವನೆ ಮೂಡಿಸುತ್ತದೆ. ಸಮುದಾಯದಲ್ಲಿ ಸಂಸ್ಥೆಯ ಚಟುವಟಿಕೆಗಳು ವಿವಿದ ರೀತಿಯಲ್ಲಿ ಸಮುದಾಯದ ಅನೇಕ ಜನರಿಗೆ ಪ್ರಯೋಜನವಾಗಿವೆಯೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ವ್ಹಿ.ವಾಯ್.ಎಮ್ ಸಂಸ್ಥೆಯ ಹೇಮಾ, ಸುಹಾನಿ ಚೌವಾಣ್ ಡಿಮ್ಹಾನ್ಸ್ ಸಂಸ್ಥೆಯ ಇತರ ಸಿಬ್ಬಂದಿಗಳು ಹಾಗೂ ಆರೂಢ ಸಂಸ್ಥೆಯ ಮುಖ್ಯಸ್ಥರಾದ ನಾಗರಾಜ ಹೂಗಾರ ಮತ್ತು ಧಾರವಾಡದ ಮಮತಾ ಬುದ್ದಿಮಾಂದ್ಯ ವಿಶೇಷ ಮಕ್ಕಳ ಶಾಲೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

ಡಿಮ್ಹಾನ್ಸ್ ಸಂಸ್ಥೆಯ ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ವಿಜಯಕುಮಾರ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ರೇಖಾ ಅವರು ಪ್ರಾರ್ಥಿಸಿದರು. ಡಿಮ್ಹಾನ್ಸ್‍ನ ಮನೋವೈದ್ಯಕೀಯ ಸಮಾಜಕಾರ್ಯಕರ್ತ ಅಶೋಕ ಕೋರಿ ವಂದಿಸಿದರು.