ಕಲಿಕೆಯು ಮಕ್ಕಳ ಉತ್ಸಾಹ ಇಮ್ಮಡಿಗೊಳಿಸಬೇಕು: ವೀರಣ್ಣಾ ಕೌಲಗಿ

ಅಫಜಲಪೂರ:ಫೆ.26: ಭಾರತದ ನಾಳೆಗಳು ವಿಶ್ವದೆಲ್ಲೆಡೆ ಇನ್ನೂ ಹೆಚ್ಚಾಗಿ ಪ್ರಜ್ವಲಿಸಬೇಕಾದರೆ ನಮ್ಮ ಶಾಲಾ ಮಕ್ಕಳು ಕಲಿಕೆಯನ್ನು ಸಂಭ್ರಮಿಸುವಂತೆ ಮಾಡಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾ ಕೌಲಗಿ ಹೇಳಿದರು.

ತಾಲೂಕಿನ ಉಡಚಣ ಹಟ್ಟಿ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮೂರು ದಿನಗಳ ಮಕ್ಕಳ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ಕಲಿಕೆ ಒತ್ತಾಯಪೂರ್ವಕವಾಗಿರಬಾರದು. ಮಕ್ಕಳ ಉತ್ಸಾಹ ಇಮ್ಮಡಿಗೊಳಿಸುವಂತಿರಬೇಕು. ಮಕ್ಕಳ ಶಾಲಾ ಹಂತದಲ್ಲಿಯೇ ಸಾಹಿತ್ಯಿಕ ಒಲವು ಮೂಡಿಸಿ ಕವಿ, ಕಥೆಗಾರರನ್ನಾಗಿಸುವುದು ನಿಜಕ್ಕೂ ಶ್ಲಾಘನೀಯ ಕಾರ್ಯ.
ಪಾಲಕರು ಮಕ್ಕಳ ಅಂಕದ ಹಿಂದೆ ಬೆನ್ನು ಬೀಳದೆ ಅವರಲ್ಲಿ ಅಡಗಿರುವ ಸೂಪ್ತ ವಿಶೇಷ ಸಾಮಥ್ರ್ಯಕ್ಕೆ ಪ್ರೇರಣೆ ನೀಡುತ್ತಾ ಸಾಗಬೇಕು. ಮಾತೃಭಾಷೆಯಲ್ಲಿನ ಶಿಕ್ಷಣ ನಿಜಕ್ಕೂ ಉತ್ತಮವಾದುದು.
ಸರ್ಕಾರಿ ಶಾಲೆಯ ಮಕ್ಕಳು ಮನೆಗೆಲಸ, ಟ್ಯೂಷನ್ ಇತ್ಯಾದಿ ಒತ್ತಡಗಳು ಇಲ್ಲದೆ ಆಡಿ, ಕೂಡಿ, ಕುಣಿದು, ನಲಿದು ಬೆಳೆಯುತ್ತಾರೆ. ಹೀಗಾಗಿ ಅವರು ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಮಕ್ಕಳು ಬರೆದ ಕವಿತೆ, ಕಥೆ, ಕಿರುನಾಟಕಗಳ
ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು.

ಬಳಿಕ ಸಹಾಯಕ ನಿರ್ದೇಶಕ
ರಮೇಶ ಪಾಟೀಲ ಮಾತನಾಡಿ “ಈ ಮೂರು ದಿನದ ಸಾಹಿತ್ಯ ಸಂಭ್ರಮ ಮಕ್ಕಳ ಬದುಕಿನುದ್ದಕ್ಕೂ ಅವರ ಸ್ಮೃತಿ ಪಟಲದಲ್ಲಿ ಅಳಿಯದೆ ಉಳಿಯಲಿದೆ. ನಾವು ಬಾಲ್ಯದಲ್ಲಿ ಇಂತಹ ಅವಕಾಶ ಪಡೆದಿಲ್ಲ, ನೀವು ನಿಜಕ್ಕೂ ಪುಣ್ಯವಂತರು ಎಂದರು. ಹಾಗೆಯೇ ಸಂಪನ್ಮೂಲ ವ್ಯಕ್ತಿಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

ಈ ಸಂದರ್ಭದಲ್ಲಿ “ಸಾಹಿತ್ಯ ಸಂಭ್ರಮ” ಜಿಲ್ಲಾ ಸಂಯೋಜಕರಾದ ರವಿಚಂದ್ರ ಅತನೂರ, ಹೊನ್ನಪ್ಪ ಕಂಬಾರ, ಭೀಮರಾಯ ದೊಡಮನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಾವಿತ್ರಿ ಮೇತ್ರಿ, ಹಣಮಂತ ಬಂಡಗಾರ, ಚಂದ್ರಕಾಂತ ದೊಡಮನಿ, ಸೈಪನ್ ಸಾಬ್ ದೇವರಮನಿ, ಸುಭಾಸ ಬಂಡಗಾರ, ಹೈದರಸಾಬ ಚೌಧರಿ, ಭೀಮಾಶಂಕರ ಡೊಂಗರಿತೋಟ, ಮಲ್ಲು ಬಂಡಗರ, ಲಕ್ಷ್ಮಣ ಜಾನಕರ, ವಿಠ್ಠಲ ಜಾನಕರ, ರೇವಣ್ಣಾ ಪಡೇರ, ಗೋಲಾಳಪ್ಪ ಪಾಟೀಲ, ರಮೇಶ ಚಲಗೇರಿ, ಜಗದೇವಪ್ಪ ಸೋಲಾಪುರ, ಈರಣ್ಣ ಪಡಶೆಟ್ಟಿ, ಗ್ರಾ.ಪಂ ಸದಸ್ಯರು, ಮಾಜಿ ಸದಸ್ಯರು, ಗ್ರಾಮಸ್ಥರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.