
ಧಾರವಾಡ ಫೆ.22: ಕಲಿಕೆ ಎನ್ನುವುದು ನಿರಂತರತೆಯ ಗುಣ ಹೊಂದಿದೆ. ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುವಲ್ಲಿ ಕಲಿಕಾ ಹಬ್ಬ ಪರಿಣಾಮಕಾರಿಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಹೇಳಿದರು.
ಅವರು ಜಿಲ್ಲೆಯ ಕರಡಿಗುಡ್ಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇಂದಿನಿಂದ ಪ್ರಾರಂಭವಾದ ಮೂರು ದಿನಗಳ ಜಿಲ್ಲಾ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಿಕ್ಷಣದ ಜತೆಗೆ ಇನ್ನಿತ್ತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿರಂತರವಾಗಿ ಕಲಿಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಬದುಕಿನ ಅನುಭವಗಳು ಕಲಿಕೆಯ ಪ್ರಕ್ರಿಯೆಯಲ್ಲಿ ಬಳಕೆಯಾಗುತ್ತವೆ. ತರಗತಿ ಕೋಣೆಯಲ್ಲಿ ಒತ್ತಡಮುಕ್ತವಾಗಿ ಸಂಭ್ರಮದಿಂದ ಕಲಿಯಬಹುದು ಎಂಬುದಕ್ಕೆ ಕಲಿಕಾ ಹಬ್ಬ ಸಾಕ್ಷಿಯಾಗಿದೆ ಎಂದರು.
ಉಪಸಮನ್ವಯಾಧಿಕಾರಿ ಜಿ.ಎನ್.ಮಠಪತಿ ಮಾತನಾಡಿ, ನಾಟಕ, ಚರ್ಚೆ, ಸಂವಾದ, ಯೋಜನೆ, ಪ್ರಯೋಗ ಮುಂತಾದ ಒಡನಾಟದ ಚಟುವಟಿಕೆಗಳ ಕಲಿಕೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಕಲಿಕಾ ಹಬ್ಬದ ಚಟುವಟಿಕೆಗಳನ್ನು ಆಡು-ಹಾಡು, ಕಾಗದ-ಕತ್ತರಿ, ಊರು ತಿಳಿಯೋಣ, ಮಾಡು-ಆಡು ಎಂಬ ಗುಂಪುಗಳಲ್ಲಿ ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ತಮ್ಮಲ್ಲೇ ಚರ್ಚಿಸಿ, ತಾರ್ಕಿಕವಾಗಿ ಆಲೋಚಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಮಕ್ಕಳು ಖುಷಿಯಿಂದ ಪಾಲ್ಗೊಂಡು ಮೂರು ದಿನಗಳ ಕಲಿಕಾ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಜಿಜ್ಞಾóಸ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ, ದ್ವಿತೀಯ ಸ್ಥಾನವನ್ನು ಪಡೆದು 12 ಸಾವಿರ ನಗದು ಪುರಸ್ಕಾರ ಪಡೆದ ಕುರಡಿಕೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಜ್ಯೋತಿ ಅಂಗಡಿ ಮತ್ತು ಅನಿತಾ ಉಣಕಲ್ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶಿ ಶಿಕ್ಷಕರಾದ ರಾಜಶ್ರೀ ಬೀಡಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಮೆರವಣಿಗೆ, ಎತ್ತಿನ ಬಂಡಿ, ಅಕ್ಷರ ಮಾಲೆ, ಡೊಳ್ಳು ಕುಣಿತ ಹಾಗೂ ಇತರ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿ ಬಂದಿತು. ಜಿಲ್ಲಾ ಮಟ್ಟದ ಕಲಿಕಾ ಹಬ್ಬದಲ್ಲಿ ಸ್ಥಳೀಯ 150 ಮಕ್ಕಳು ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳ 150 ಮಕ್ಕಳು ಭಾಗವಹಿಸಿದ್ದು, ಮೂರು ದಿನ ಕಲಿಕಾ ಹಬ್ಬ ನಡೆಯಲಿದೆ.
ಕ್ಷೇತ್ರಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ, ಗಿರೀಶ ಪದಕಿ, ಅಶೋಕ ಸಿಂದಗಿ, ಸಹಾಯಕ ಯೋಜನಾ ಸಮನ್ವಯ ಅಧಿಕಾರಿಗಳಾದ ಶಿವಲೀಲಾ ಕಳಸಣ್ಣವರ, ಪ್ರಕಾಶ ಭೂತಾಳಿ, ವಿಷಯ ಪರಿವೀಕ್ಷಕರಾದ ಡಾ.ಪೂರ್ಣಿಮಾ ಮುಕ್ಕುಂದಿ, ಸಂಜಯ ಮಾಳಿ, ಯಲ್ಲಪ್ಪ ಹುಬ್ಬಳ್ಳಿ, ರೇಖಾ ಭಜಂತ್ರಿ, ಶಿಕ್ಷಣ ಸಂಯೋಜಕಿ ಟಿ.ಎನ.ಸಯ್ಯದ್, ಕರಡಿಗುಡ್ಡ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಕರಡಿಗುಡ್ಡ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರಡಿಗುಡ್ಡ ಶಾಲೆಯ ವಿದ್ಯಾರ್ಥಿನಿಯಾದ ಅಶ್ವಿನಿ ಗೌಡರ ಅಧ್ಯಕ್ಷತೆ ವಹಿಸಿದ್ದರು. ಇನ್ನುಳಿದ ವಿದ್ಯಾರ್ಥಿಗಳು ಅತಿಥಿಗಳಾಗಿ ಭಾಗವಹಿಸಿದ್ದರು. ಉಪಸಮನ್ವಯಾಧಿಕಾರಿ ಎಸ್.ಎಂ.ಹುಡೇದಮನಿ ಸ್ವಾಗತಿಸಿದರು. ಚೈತ್ರಾ ಕರಿಕೊಪ್ಪ ನಿರೂಪಿಸಿದರು. ಕೆಪಿಎಸ್ ಕರಡಿಗುಡ್ಡ ಶಾಲೆಯ ಪ್ರಾಂಶುಪಾಲ ಎನ್.ಟಿ.ಕಾಖಂಡಕಿ ವಂದಿಸಿದರು.