ಕಲಾ ಪರಂಪರೆಯ ಉಳಿಕೆಗೆ ಕಲಿಕೆ ಅಗತ್ಯ

ಕಲಬುರಗಿ,ಮಾ.06:ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳ ಪರಂಪರೆಯನ್ನು ಉಳಿಸಿ ಬೆಳೆಸಲು ಕಲಿಕೆ ಅಗತ್ಯವಾಗಿದ್ದು, ಸಂಸ್ಕೃತಿ ಇಲಾಖೆಯು ಉತ್ತಮ ಕಾರ್ಯ ಮಾಡಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಸೇಡಂ ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಹವ್ಯಾಸಕ್ಕೆ ಬೆಳೆಸಿಕೊಂಡಿರುವ ಕಲೆಗಳನ್ನು ಸಾಮುದಾಯಿಕ ಸಂತೋಷಕ್ಕೆ ಪ್ರದರ್ಶನ ಮಾಡುತ್ತಾ ಬರಲಾಗಿದೆ. ಆಯಾ ಪ್ರಕಾರದಲ್ಲಿ ಉತ್ತಮ ಸಾಧನೆ ಮಾಡಿದ ನಂತರ ಅದನ್ನು ವೃತ್ತಿಯಾಗಿ ಸ್ವೀಕರಿಸಲು ಅವಕಾಶ ಇರುತ್ತದೆ. ಸಂಸ್ಕೃತಿ ಸಚಿವರ ವಿಶೇಷ ಆಸಕ್ತಿಯ ಫಲವಾಗಿ ಇಂತಹ ಮಹತ್ವದ ಕಾರ್ಯ ನಡೆದಿರುವುದು ಸ್ವಾಗತಾರ್ಹ ಎಂದರು.

ಮುಖ್ಯ ಅತಿಥಿಯಾಗಿದ್ದ ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ಯಾವುದೇ ಕಲಾಪ್ರದರ್ಶನ ಮಾಡುವಾಗ ಕಲಾವಿದರು ಸ್ವಯಂ ಸಂತೋಷ ಅನುಭವಿಸಿದರೆ ಮಾತ್ರ ಪ್ರೇಕ್ಷಕರೂ ಸಂತೋಷ ಪಡುತ್ತಾರೆ. ಕಲಿಕೆಯಿಂದ ಮಾತ್ರ ಕಲಾ ಪರಂಪರೆ ಉಳಿದು ಬೆಳೆಯಲು ಸಾಧ್ಯ ಎಂದರು.

ಅತಿಥಿಗಳಾಗಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ನೀರಾವರಿ ಯೋಜನೆಗಳ ವಲಯದ ಅಧ್ಯಕ್ಷರಾದ ಹರ್ಷವರ್ಧನ ಗುಂಡಪ್ಪ ಗುಗಳೆ, ಕರ್ನಾಟಕ ರಂಗ ಸಮಾಜದ ಸದಸ್ಯ ಪ್ರಭುದೇವ ಕಪಗಲ್ ಹಾಗೂ ತರಬೇತಿ ಶಿಬಿರದ ಸಂಚಾಲಕರಾದ ಪ್ರವೀಣ ನಾಯಕ ಮತ್ತು ರಾಣೋಜಿ ದೊಡ್ಡಮನಿ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ್ ಪ್ರಾಸ್ತಾವಿಕ ಮಾತನಾಡಿದರು. ರಂಗಾಯಣ ಉಪ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕಿ ಉತ್ತರಾದೇವಿ ವಂದಿಸಿದರು.