ಕಲಾ ಜಗತ್ತಿಗೆ ಕಲಾವಿದರ ಕೊಡುಗೆ ಅಪಾರ : ಡಾ. ಸುರೇಶ ಜಂಗೆ

ಕಲಬುರಗಿ:ಮಾ.02:ಕಲಾವಿದರ ಕುಂಚದಿಂದ ಮೂಡಿರುವ ಕಲಾಕೃತಿಗಳು ನಾಡಿನ ಶ್ರೇಷ್ಠ ಸಂಸ್ಕøತಿ ಮತ್ತು ಪರಂಪರೆಯ ವಿಭಿನ್ನ ಸಂಗತಿಗಳನ್ನು ಅಭಿವ್ಯಕ್ತಿಗೊಳಿಸುತ್ತವೆ. ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು ತಮ್ಮ ಸೃಜನಶೀಲ ಕಲಾಚಿತ್ರಗಳ ಮೂಲಕ ಕಲಾ ಜಗತ್ತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ. ಸುರೇಶ ಜಂಗೆ ಹೇಳಿದರು.

ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆ ಹಾಗೂ ಬೆಂಗಳೂರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಕಲಬುರಗಿ ರಂಗಾಯಣದಲ್ಲಿ ಆಯೋಜಿಸಿದ 10ನೇ ವಾರ್ಷಿಕ ಕಲಾ ಪ್ರದರ್ಶನ ಚಿತ್ರಕಲಾ ಶಿಬಿರ ಮತ್ತು ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೃಶ್ಯಕಲಾ ಮಾಧ್ಯಮ ವಿಭಿನ್ನ ಕಲಾ ಸಂಸೃತಿಯನ್ನು ವಿಶ್ವಕ್ಕೆ ಪರಿಚಯಿಸುತ್ತದೆ. ಬಹುಶಿಸ್ತೀಯ ನೆಲೆಯಲ್ಲಿ ಭಾವನೆ ಮತ್ತು ಅನುಭಾವಗಳನ್ನು ಪ್ರತಿಬಿಂಬಿಸುವ ಚಿತ್ರ ಕಲೆಗಳು ಸಮಾಜದ ವಾಸ್ತವ ಸಂಗತಿಗಳನ್ನು ವೈಚಾರಿಕ ದೃಷ್ಠಿಕೋನದಿಂದ ಆಲೋಚಿಸುವಂತೆ ಪ್ರೇರೇಪಿಸುತ್ತವೆ. ಬಹುಮುಖಿ ಕ್ಷೇತ್ರವಾಗಿರುವ ದೃಶ್ಯಕಲೆ ಒಂದು ವಿಭಿನ್ನ ವೃತ್ತಿಪರ ಕ್ಷೇತ್ರವಾಗಿದೆ. ಈ ನಿಟ್ಟಿನಲ್ಲಿ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ವೇದಿಕೆ ಕಲ್ಪಿಸುತ್ತಿರುವ ದೃಶ್ಯ ಬೆಳಕು ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಂಯೋಜಕ ಹಾಗೂ ಸಹಾಯಕ ಪರಾಧ್ಯಾಪಕ ಡಾ. ಶಿವಾನಂದ ಬಂಟನೂರ ಕಲಾಶಿಬಿರವನ್ನು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಚಿತ್ರಕಲೆ ಪ್ರಾಚೀನ ಕಾಲದಲ್ಲಿ ಗ್ರೀಕ್, ರೋಮ್ ಮತ್ತು ಈಜಿಪ್ಟ್ ನಾಗರೀಕತೆ ಮತ್ತು ಸಂಸ್ಕøತಿ ಚೌಕಟ್ಟಿನಲ್ಲಿ ರೂಪಗೊಂಡಿದ್ದು, ಸಂಸ್ಕøತಿಯ ಭಾಗವಾಗಿ ಬೆಳೆದಿರುವ ಚಿತ್ರಕಲೆಗಳು ಸೂಕ್ಷ್ಮ ಅಭಿವ್ಯಕ್ತಿ ಮತ್ತು ಸೌಂದರ್ಯ ಗುಣಗಳಿಂದ ಜನಾಕರ್ಷಣೆ ಪಡೆದಿದೆ. ಆಧುನಿಕ ಜಗತ್ತಿನಲ್ಲಿ ಚಿತ್ರ ಸೂತ್ರ, ತತ್ವ ಮತ್ತು ಸಿದ್ಧಾಂತಗಳನ್ನು ರೂಪಿಸಿ ನೋಡುಗರ ಮನಸ್ಸನ್ನು ಸುಂದರಗೊಳಿಸುತ್ತಿರುವ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಲು ಇಂತಹ ಕಲಾ ಶಿಬಿರ ಮತ್ತು ಪ್ರದರ್ಶನಗಳಿಂದ ಉತ್ತೇಜನ ಸಿಗಲಿದೆ. ಅಪರೂಪದ ಚಿತ್ರಗಳಿಗೆ ಆರ್ಥಿಕ ಸಮಸ್ಯೆ ಹಾಗೂ ಚಿತ್ರಗಳ ಮಾರಾಟ ಅವಕಾಶವಿಲ್ಲದೆ ಕಲಾವಿದರ ಬದುಕು ಜಿಗುಪ್ಸೆಯಿಂದ ಜರ್ಜರಿತವಾಗುತ್ತಿರುವ ಸಂದರ್ಭದಲ್ಲಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.

ಕಲಬುರಗಿ ಪತ್ರಾಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ ಮಾತನಾಡಿ ದೃಶ್ಯ ಮಾಧ್ಯಮ ಮಾನವನ ಭಾವನೆಗಳಿಗೆ ಹಿಡಿದ ಕೈಗನ್ನಡಿಯಾಗಿದ್ದು, ಬದುಕಿನ ಸತ್ಯ ಸಂಗತಿಗಳ ತಳದ ಭಾವನೆಗಳನ್ನು ಬಿಂಭಿಸುತ್ತವೆ. ಅಂತರಂಗದ ಭಾವನೆಗಳನ್ನು ಪುಟಿದೇಳುವಂತೆ ಮಾಡುವ ಶಕ್ತಿ ಚಿತ್ರಕಲೆಗಿದೆ. ಅಸಂಖ್ಯಾತ ನೋವುಗಳನ್ನು ಹೇಳುವ ದೃಶ್ಯಗಳು ನೋಡುಗನ ಮನಕಲಕುತ್ತವೆ. ಆದರಿಂದ ಕಲಾವಿದರಿಗೆ ಆರ್ಥಿಕ ನೆರವು ನೀಡುವ ಮೂಲಕ ಪ್ರೋತ್ಸಾಹಿಸುವುದು ಅಗತ್ಯವಿದೆ. ಆರ್ಥಿಕ ನೆರವಿಲ್ಲದೆ ಹಾಗೂ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ನಾಡೋಜ ಡಾ. ಜೆ. ಎಸ್. ಖಂಡೇರಾವ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಡಾ. ಕೆ. ಎಂ. ಕುಮಾರಸ್ವಾಮಿ, ಬಸವರಾಜ ಉಪ್ಪಿನ್, ಬಾಬುರಾವ್ ಹೆಚ್. ವಿಬಿ ಬಿರಾದಾರ, ಡಾ. ಬಾಬುರಾವ ನಡೋಣಿ, ಅಣ್ಣಾರಾಯ ಹಂಗರಗಿ, ನಿಂಗನಗೌಡ ಪಾಟಿಲ್, ಸಿದ್ದು ಮರಗೋಳ, ಮಹೇಶ್ ಶ್ರೀಗಣಿ, ಹಾಗಿ ಮಲಂಗ, ಜಗದೀಶ್ ಕಾಂಬಳೆ ಉಪಸ್ಥಿತರಿದ್ದರು.

ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಡಾ. ಪಿ. ಪರಶುರಾಮ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ. ಎನ್. ಪಾಟಿಲ್ ವಂದಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯುತ್ತಮ ಕಲಾವಿದರಿದ್ದಾರೆ. ಅವರ ವೈವಿಧ್ಯಮಯ ಕಲಾಕೃತಿಗಳು ವಿಶ್ವಮಟ್ಟದಲ್ಲಿ ಪ್ರದರ್ಶನ ಕಂಡು ಗೌರವ ಪಡೆಯುತ್ತಿವೆ. ಜಿಲ್ಲಾ ಆಡಳಿತ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಈ ಭಾಗದ ಹಿರಿಯ ಕಲಾವಿದರ ಕಲಾಕೃತಿಗಳನ್ನು ಶಾಸ್ವತವಾಗಿ ಪ್ರದರ್ಶನಗೊಳ್ಳಲು ಸುಸಜ್ಜಿತ ಕಲಾ ಗ್ಯಾಲರಿ ನಿರ್ಮಾಣದ ಅಗತ್ಯವಿದೆ. ಸ್ಥಳೀಯ ಕಲಾವಿದರ ವಿವಿಧ ಅಪರೂಪದ ಕಲೆಗಳು ಅಳಿಯದೆ ಉಳಿಯಬೇಕಿದೆ. ಅವುಗಳ ಐತಿಹಾಸಿಕ ಮೌಲ್ಯ ಕಾಪಾಡಬೇಕಿದೆ. ಕಲಾವಿದರ ಬಹುದಿನಗಳ ಬೇಡಿಕೆಯಾಗಿರುವ ಕಲಬುರಗಿಯಲ್ಲಿ ‘ಕಲಾ ಗ್ಯಾಲರಿ’ ನಿರ್ಮಿಸುವುದು ಅವಶ್ಯವಿದೆ. ಈ ನಿಟ್ಟಿನಲ್ಲಿ ಭಾಗದ ಕಲಾವಿದರು, ಕಲಾಚಿಂತಕರು ಹಾಗೂ ಕಲಾ ಆರಾಧಕರು ಸೇರಿ ಸಂಘಟಿತ ಪ್ರಯತ್ನ ಮಾಡಬೇಕಿದೆ.
ಡಾ. ಸುರೇಶ ಜಂಗೆ
ಗ್ರಂಥಪಾಲಕರು
ಗುಲಬರ್ಗಾ ವಿಶ್ವವಿದ್ಯಾಲಯ