ಕಲಾಸೇವೆಗೆ ಮುಡಿಪಾಗಿರುವ ಕಲಾವಿದರನ್ನು ಸರ್ಕಾರ ಪ್ರೋತ್ಸಾಹಿಸಲಿ –  ಕಲ್ಲಯ್ಯಜ್ಜ ಸ್ವಾಮಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ.28 :- ಕಲಾ ಸೇವೆಗೆಂದೆ ಜೀವನ ಮುಡಿಪಾಗಿಟ್ಟಿರುವ ಕಲಾವಿದರನ್ನು ಗುರುತಿಸಿ ಸರ್ಕಾರ ಪ್ರೋತ್ಸಾಹಿಸಬೇಕಾಗಿದೆ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷ ಕಲ್ಲಯ್ಯಜ್ಜ ಸ್ವಾಮೀಜಿ ತಿಳಿಸಿದರು.
ಅವರು ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಕಲಾರತ್ನ ಮಹಿಳಾ ಕಲಾವಿದರ ಸಂಘದಿಂದ ಬುಧವಾರ ಆಯೋಜಿಸಿದ್ದ ಕಲ್ಲಯ್ಯಜ್ಜನವರ ಪಾದಪೂಜೆ ಹಾಗೂ ತುಲಾಭಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಎಲ್ಲರೂ ವೈದ್ಯರು, ಎಂಜಿನಿಯರ್, ಶಿಕ್ಷಕ ಸೇರಿ‌ ನಾನಾ ನೌಕರಿ ಪಡೆಯುವತ್ತ ಚಿತ್ತ ಹರಿಸುತ್ತಾರೆ. ಆದರೆ, ಕಲಾವಿದರಾಗುವುದು ಬಹಳ ವಿರಳ. ಇಂಥ ಕಲಾ ಸೇವೆಗೆ ಜೀವನ ಮುಡುಪಾಗಿಡುವ ಕಲಾವಿದರನ್ನು ಸರಕಾರ ಪ್ರೋತ್ಸಾಹ ನೀಡುವ ಮೂಲಕ ಅವರ ಬದುಕಿಗೆ ನೆರವಾಗಬೇಕು ಎಂದು ಹೇಳಿದರಲ್ಲದೆ, ರಂಗಭೂಮಿ ಕಲಾವಿದೆಯರು ಪೌರಾಣಿಕ, ಸಾಮಾಜಿಕ, ಬಯಲಾಟದಂಥ ನಾಟಕಗಳಲ್ಲಿ ನಿತ್ಯ ಅಭಿನಯಿಸುವ ಸಂದರ್ಭಗಳು ಎದುರಾಗಬಹುದು. ಆದ್ದರಿಂದ ಕಲಾವಿದೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು  ರಂಗಭೂಮಿ ಕಲೆಯ ತವರೂರಂತೆ ಇರುವ ಕೂಡ್ಲಿಗಿಯಲ್ಲಿ ರಂಗಮಂದಿರ ನಿರ್ಮಾಣ ಮಾಡುವ ಮೂಲಕ ಕಲಾವಿದರ ತರಬೇತಿ ಕೇಂದ್ರವಾಗಿಸಲು ಮುಂದಾಗಬೇಕು ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷ ಶ್ರೀ ಕಲ್ಲಯ್ಯಜ್ಜ ಸ್ವಾಮೀಜಿ ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಕೂಡ್ಲಿಗಿ ಹಿರೇಮಠದ  ಪ್ರಶಾಂತಸಾಗರ ಸ್ವಾಮೀಜಿ ಮಾತನಾಡಿ, ಸ್ಥಳೀಯ ರಂಗಭೂಮಿ ಕಲಾವಿದೆಯರು ಸೇರಿ ಪಟ್ಟಣದಲ್ಲಿ ಮೂರನೇ ಬಾರಿಗೆ ಗದಗ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮ ನಡೆಸುವ ಮೂಲಕ ನಾಡಿಗೆ ಒಳಿತನ್ನು ಬಯಸುವ ಕಾರ್ಯ ಶ್ಲಾಘನೀಯ. ರಂಗನಟಿಯರ ಬದುಕು ಕಷ್ಟದಲ್ಲಿದ್ದರೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಸರಕಾರ ರಂಗನಟಿಯರಿಗೆ ಆರ್ಥಿಕವಾಗಿ ಆಸರೆಯಾಗುವಂಥ ಯೋಜನೆಗಳನ್ನು ಜಾರಿಗೊಳಿಸಲಿ ಎಂದು ಒತ್ತಾಯಿಸಿದರು. ಸಾಹಿತಿ ಭೀಮಣ್ಣ ಗಜಾಪುರ, ಪಪಂ ಸದಸ್ಯ ಕಾವಲಿ ಶಿವಪ್ಪನಾಯಕ  ಕೂಡ್ಲಿಗಿ ರಂಗಕಲೆ ಹಾಗೂ ಕಲಾವಿದರ ಬದುಕು ಬವಣೆಗಳ ಮಾತನಾಡಿದರು. ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷ ಶ್ರೀ ಕಲ್ಲಯ್ಯಜ್ಜನವರ 2,134ನೇ ತುಲಾಭಾರ  ಸೇವೆಯನ್ನು ಕೂಡ್ಲಿಗಿಯಲ್ಲಿ ಕಲಾರತ್ನ ಸಂಘದ ಮಹಿಳಾ ಕಲಾವಿದರು ನೆರವೇರಿಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯೆ ಡಾಣಿ ಚೌಡಮ್ಮ, ಆಲ್ದಳ್ಳಿ ಬಸವರಾಜಪ್ಪ, ರಂಗಭೂಮಿ ಹಿರಿಯ ಕಲಾವಿದೆಯರಾದ ವಿರೂಪಾಪುರ ಅಂಜಿನಮ್ಮ, ವೆಂಕಮ್ಮ, ಸೋಗಿ ನಾಗರತ್ನಮ್ಮ,  ಪವಿತ್ರಾ ಗೊಲ್ಲರಹಳ್ಳಿ, ಸ್ವಪ್ನಾ, ಹಿರಿಯ ಕಲಾವಿದರಾದ ಭಜನೆ ನರಸಿಂಹಪ್ಪ, ಮಂಗನಹಳ್ಳಿ ಶೇಖರಪ್ಪ, ತಿಂದಪ್ಪ, ಕೂಡ್ಲಿಗಿ ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬ್ಯಾಳಿ ವಿಜಯಕುಮಾರ ಗೌಡ,  ಮುಖಂಡರಾದ ಡಾಣಿ ರಾಘವೇಂದ್ರ, ಎಸ್.ಸುರೇಶ್, ವಿಭೂತಿ ವೀರಣ್ಣ, ಜಯಮ್ಮರ ರಾಘವೇಂದ್ರ, ಹಡಗಲಿ ವೀರಭದ್ರಪ್ಪ, ಕುಮಾರ್, ಕಲಾರತ್ನ ಸಂಘದ ಅಧ್ಯಕ್ಷೆ ಗೌರಮ್ಮ, ಪದಾಧಿಕಾರಿಗಳಾದ ಜ್ಯೋತಿ, ಅಂಜಿನಮ್ಮ, ದಿವ್ಯಕುಮಾರಿ (ಬಸಂತಿ), ಬ್ಲಾಕ್ ಸುಮಾ, ವೈಟ್ ಸುಮಾ, ಹೈಟ್ ಸುಮಾ, ತಾರಾ, ನಾಗವೇಣಿ, ಜೂನಿಯರ್ ಜ್ಯೋತಿ, ರಾಧಾ, ಸಣ್ಣವೆಂಕಮ್ಮ ಸೇರಿ ಇತರರಿದ್ದರು. ಕಾರ್ಯಕ್ರಮಕ್ಕೂ‌ ಮುನ್ನ ಡಾ.ಪಂ.ಪುಟ್ಟರಾಜ ಗವಾಯಿ ಹಾಗೂ ಕಲ್ಲಯ್ಯಜ್ಜನವರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆದಿದ್ದು, ಮೆರವಣಿಗೆಯುದ್ದಕ್ಕೂ ರಂಗ ನಟಿಯರು ನೃತ್ಯ ಮಾಡಿ ಸಂಭ್ರಮಿಸಿದರು.
ನಿನ್ನೆ ರಾತ್ರಿಯಿಂದ ಇಂದು ನಸುಕಿನ ಜಾವದವರೆಗೆ  ಕೂಡ್ಲಿಗಿ ರಂಗಕಲಾವಿದರ ಬಳಗದ ಅಭಿನಯದಲ್ಲಿ ಶ್ರೀ ರೇಣುಕಾ ಜಮದಾಗ್ನಿ ಕಲ್ಯಾಣ ಅರ್ಥಾತ್ ಕಾರ್ತಿವೀರಾರ್ಜುನನ ಗರ್ವಭಂಗ ಬಯಲಾಟ  ಪ್ರದರ್ಶನ ನಡೆಸಲಾಗಿ ಅನೇಕ ರಂಗಕಲಾಸಕ್ತರು ಬಯಲಾಟ ಪ್ರದರ್ಶನವನ್ನು  ವೀಕ್ಷಿಸಿ ಮನಸೂರೆಗೊಂಡರು.