ಕಲಾವಿದೆ ಮೈಸೂರು ಅನುರಾಧ ಇನ್ನಿಲ್ಲ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.29: ಮೈಸೂರು ಅನುರಾಧ ಎಂಬ ಶ್ರೇಷ್ಠ ರಂಗಭೂಮಿ ಕಲಾವಿದೆ ನಿನ್ನೆ ಸಂಜೆ ನಿಧನರಾಗಿದ್ದಾರೆ. ತನ್ನ ಹೆಸರಿಗೆ ಮೈಸೂರನ್ನು ಅಂಟಿಸಿಕೊಂಡಿದ್ದರೂ ಅವರು ಅಭಿನಯಿಸಿದ್ದು ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಗ್ರಾಮೀಣ ಹವ್ಯಾಸಿ ನಾಟಕಗಳಲ್ಲಿ. 1980-90ರ ದಶಕದಲ್ಲಿ ಎನ್.ಎಸ್. ಜೋಷಿ ಕೃತ  ‘ರತ್ನಮಾಂಗಲ್ಯ’ ನಾಟಕದ ಛಾಯಾ ಪಾತ್ರಕ್ಕೆ ಅನುರಾಧ ಬೇಕೇಬೇಕು ಎನ್ನುವಷ್ಟು ಬೇಡಿಕೆಯಿದ್ದ ಸುರಸುಂದರಿ ಇವರು. ಸೌಂದರ್ಯದ ಖನಿಯಾಗಿದ್ದರೂ ಅಂಹಕಾರವಿರಲಿಲ್ಲ. ಅತ್ಯಂತ ಮೆದುಮಾತಿನ ಸೌಮ್ಯ ಸ್ವಭಾವದ ಸ್ನೇಹಪರ ವ್ಯಕ್ತಿತ್ವ ಅನುರಾಧರದ್ದು ಎಂದು ಕಲಾಭಿಮಾನಿಗಳ ಅಭಿಪ್ರಾಯವಾಗಿತ್ತು.

ಮೈಸೂರಿನಿಂದ ಅದು ಹೇಗೆ ಬಳ್ಳಾರಿ ಜಿಲ್ಲೆಗೆ ವಲಸೆ ಬಂದು ನೆಲೆನಿಂತರೋ ಈ ಅಪ್ಪಟ ಕಲಾವಿದೆ! ಅನ್ನದ ಋಣ ಯಾರು ಬಲ್ಲರು? ರಂಗಭೂಮಿಯಲ್ಲಿ ಸಾಕಷ್ಟು ಬೇಡಿಕೆ ಗಳಿಕೆ ಇದ್ದರೂ ಅದೇಕೋ ಅಲೆಮಾರಿಯಂತೆ ಊರು ಮನೆ ಬದಲಿಸುತ್ತಾ ಬದುಕಿದರು. ಹಗರಿ ಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿ, ಹೊಸಪೇಟೆ, ಗಂಗಾವತಿ… ಕೊನೆಗೆ ಕನಕಗಿರಿ.  ಎಲ್ಲಿಯ ಮೈಸೂರು ನಗರಿ, ಎಲ್ಲಿಯ ಕನಕಗಿರಿ! ಯಾರ ಅಂತ್ಯ ಎಲ್ಲಿ ಎಂಬುದು ಕೆಲವರ ಜೀವನದಲ್ಲಿ ಯಾವ ಜಾತಕದಲ್ಲಿಯೂ ಸಿಗದು.  ಅಂತೂ  ಮೈಸೂರಿನ ಕಲಾರತ್ನ ಕನಕಗಿರಿಯ ಮಣ್ಣಲ್ಲಿ ಲೀನವಾಯಿತು. ಹೋಗಿಬಾ ತಾಯಿ, ಮತ್ತೊಮ್ಮೆ ಕಲಾವಿದೆಯಾಗಿ ಹುಟ್ಟಿಬಾ…
  — ಕೆ. ಜಗದೀಶ್, ಅಭಿನಯ ಕಲಾಕೇಂದ್ರ, ಬಳ್ಳಾರಿ