ಕಲಾವಿದರ ಬೇಡಿಕೆಯನ್ನು ಆಲಿಸಿ, ಈಡೇರಿಕೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ.

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ7: ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ನೇತೃತ್ವದಲ್ಲಿ ನಗರದ ಭಾವೈಕ್ಯವೇದಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರಿಗೆ ಕಲಾವಿದರು ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಹಲವು ವರ್ಷಗಳಿಂದ ಕಲ್ಯಾಣ ಕರ್ನಾಟಕ ಭಾಗದ ರಂಗಭೂಮಿ, ಜನಪದ, ಸಂಗೀತ, ನೃತ್ಯ, ಬಯಲಾಟ, ಬುಡಕಟ್ಟು ಸೇರಿ ಇತರೆ ಪ್ರಕಾರದ ಕಲಾವಿದರ ಸಮಸ್ಯೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರತಿಭಾವಂತ ಕಲಾವಿದರಿದ್ದರೂ ಕೂಡ, ಸರಕಾರ ಮಾತ್ರ ಗುರುತಿಸುವಲ್ಲಿ ತಾರತಮ್ಯ ಮಾಡುತ್ತಿದೆ. ಸರಕಾರದಿಂದ ವಿಜಯನಗರದಲ್ಲಿ ಎಂ.ಪಿ,ಪ್ರಕಾಶ್, ಕೊಪ್ಪಳದಲ್ಲಿ ಡಾ.ಸಿದ್ದಯ್ಯ ಪುರಾಣಿಕರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ಸಾಧಕ ಕಲಾವಿಧರ ಹೆಸರಿನಲ್ಲಿ ಸರಕಾರದಿಂದ ಎಲ್ಲಾ ಜಿಲ್ಲೆಗಳಲ್ಲಿ ಟ್ರಸ್ಟ್ ಸ್ಥಾಪಿಸಬೇಕು. ಆಂದ್ರಾ ಸರಕಾರದ ಮಾದರಿಯಲ್ಲಿ ಇಲ್ಲಿನ ಕಲಾವಿದರಿಗೂ ಗುರುತಿನ ಚೀಟಿ ವಿತರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಅಕಾಡಮಿ ಸ್ಥಾಪನೆಯಾಗಬೇಕು. ಕಲಾವಿದರ ಉತ್ತೇಜನಕ್ಕೆ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ, ಹಂಪಿ ಉತ್ಸವದ ಮಾಧರಿಯಲ್ಲಿ ಐತಿಹಾಸಿಕ ಕ್ಷೇತ್ರಗಳ ಹಾಗೂ ಜಿಲ್ಲಾ ಉತ್ಸವಗಳನ್ನು ಆಚರಿಸಬೇಕು. ತತ್ವಪದಕಾರ ಕಡಕೋಳ ಮಡಿವಾಳಪ್ಪ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಮಾರಂಭಗಳಲ್ಲಿ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿಧರಿಗೆ ಅವಕಾಶ ನೀಡಬೇಕು.
ರಾಜ್ಯದ ಎಲ್ಲಾ ವಸತಿಶಾಲೆಗಳಲ್ಲಿ ಜಾನಪದ ಶಿಕ್ಷಕರ ನೇಮಿಸಬೇಕು. ಪ್ರತ್ಯೇಕವಾಗಿ ವಿಧಾನಪರಿಷತ್ ಕ್ಷೇತ್ರ ರಚನೆಮಾಡಬೇಕು. ಬಸ್ ಪಾಸ್ ವಿನಾಯಿತಿ, ವಿಮಾ ಯೋಜನೆ ರೂಪಿಸಬೇಕು. ಅಕಾಲಿಕವಾಗಿ ನಿಧನ ಹೊಂದಿದಾಗ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು. ವಿಜಯನಗರ ಜಿಲ್ಲೆಯಲ್ಲಿ ಶ್ರೀಕೃಷ್ಣದೇವರಾಯ ಕಲಾಭವನ ನಿರ್ಮಾಣ ರಾಜ್ಯದ ನಾಲ್ಕು ಜಂಟಿ ನಿರ್ದೇಶಕರ ಕಚೇರಿ ಸ್ಥಾಪಿಸಬೇಕು ಸೇರಿ ವಿವಿಧ ಬೇಡಿಕೆಗಳ ಪಟ್ಟಿಯನ್ನು ಅಧ್ಯಕ್ಷೆಯವರಿಗೆ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ರಾಮೇಶ್ ಅಂಚಿನಮನೆ, ರಂಗಕ್ರರ್ಮಿ ಅಬ್ದುಲ್, ಕಲಾವಿದರಾದ ರಾಜು ಕುಲಕರ್ಣಿ, ಚಂದ್ರಶೇಖರ್, ಲಕ್ಷ್ಮಣ ಪೀರಗಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.