ಕಲಾವಿದರ ನೆರವಿಗೆ ಸರ್ಕಾರ ಧಾವಿಸಲಿ – ಪಿ ಪದ್ಮ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು.18 :-   ಕಲೆಯನ್ನೇ ದೇವರೆಂದು ನಂಬಿ ಬದುಕುವ ನಾಡಿನ ಸಾವಿರಾರು ಕಲಾವಿದರ ಜೀವನ ಶೋಚನೀಯವಾಗಿದ್ದು ಸಂಕಷ್ಟದಲ್ಲಿರುವ ರಂಗಭೂಮಿ ಸೇರಿದಂತೆ  ಎಲ್ಲಾ ಕಲಾವಿದರ ನೆರವಿಗೆ ಸರ್ಕಾರ ಧಾವಿಸಬೇಕಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ರಂಗನಟಿ ಹಾಗೂ ರಾಜ್ಯ ನಾಟಕ ಅಕಾಡೆಮಿ ಸದಸ್ಯೆ ಪಿ.ಪದ್ಮಾ ಸರ್ಕಾರವನ್ನು ಆಗ್ರಹಿಸಿದರು.
ಅವರು  ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಕಲಾರತ್ನ ಮಹಿಳಾ ಕಲಾವಿದರ ಸಂಘದಿಂದ ಭಾನುವಾರ ಆಯೋಜಿಸಿದ್ದ ಗದಗ ವೀರೇಶ್ವರ ಪುಣ್ಯಾಶ್ರಮದ ಪರಮಪೂಜ್ಯ ಡಾ. ಕಲ್ಲಯ್ಯಜ್ಜನವರ ತುಲಾಭಾರ ಹಾಗೂ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕಲೆ ಉಳಿಸಿ ಎಂದು ಎಲ್ಲಾ ಕಡೆ ಭಾಷಣಗಳಲ್ಲಿ ಹೇಳುವುದೇ ಆಗಿದೆ. ಆದರೆ, ಕಲಾವಿದರಿಗೆ ಪ್ರೋತ್ಸಾಹವೇ ದೊರೆಯುತ್ತಿಲ್ಲ. ಕರೋನಾ ಸಂಕಷ್ಟದ ಸಮಯದಲ್ಲಿ ಕಲಾವಿದರಿಗೆ ನಾಟಕ ಪ್ರದರ್ಶನ ಸೇರಿ ಯಾವುದೇ ಕಾರ್ಯಕ್ರಮಗಳು ಇರಲಿಲ್ಲ. ಆ ಸಂದರ್ಭದಲ್ಲಿ ಕಲಾವಿದರ ಬದುಕಿನ ಗೋಳು ಹೇಳತೀರದು. ಈಗಲೂ ಅದೇ ಪರಿಸ್ಥಿತಿ ಇದೆ. ಕಲಾವಿದರನ್ನು ಪ್ರೋತ್ಸಾಹಿಸಿ ಅವರ ಜೀವನಕ್ಕೆ ಆರ್ಥಿಕ ಆಸರೆಯಾಗುವಂಥ ಕಾರ್ಯಕ್ರಮಗಳು ಹೆಚ್ಚೆಚ್ಚು ಸಿಕ್ಕಾಗ ಮಾತ್ರ ಕಲೆ ಮತ್ತು ಕಲಾವಿದರನ್ನು ಉಳಿಸಿ, ಬೆಳೆಸಲು ಸಾಧ್ಯವಿದೆ ಎಂದು ಕಲಾವಿದರ ಬದುಕಿನ ಅನುಭವ ಅರಿತ ಪದ್ಮ ಅವರು ಭಾವುಕರಾಗಿ ತಮ್ಮ ಅಳಲನ್ನು ತೋಡಿಕೊಂಡರು .ಕಾಂಗ್ರೆಸ್ ಮುಖಂಡ ಗುಜ್ಜಲ್ ರಘು ಮಾತನಾಡಿ, ರಂಗಕಲೆಯ ತವರೂರು ಕೂಡ್ಲಿಗಿಯಲ್ಲಿ ರಂಗ ಕಲಾವಿದರ ಸಂಖ್ಯೆ ಹೆಚ್ಚಿದೆ. ರಂಗ ಕಲೆಯನ್ನೇ ನಂಬಿ ಜೀವನ ನಡೆಸುವ ಇಲ್ಲಿನ ಕಲಾವಿದರಿಗೆ ಹೆಚ್ಚಿನ ಆರ್ಥಿಕ ಸಹಾಯವನ್ನು ಈಗಿನ ಆಡಳಿತದ ಸರ್ಕಾರ ಒದಗಿಸುವಲ್ಲಿ ವಿಫಲವಾಗಿದ್ದು ಸರ್ಕಾರ ಇತ್ತ ಗಮನಹರಿಸಿ ಕಲೆ ಹಾಗೂ ಕಲಾವಿದರನ್ನು  ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.
ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷರಾದ ಡಾ. ಕಲ್ಲಯ್ಯಜ್ಜ ಸ್ವಾಮೀಜಿ ಆಶೀರ್ವಚನ ನೀಡಿದರು. ಪಟ್ಟಣ ಪಂಚಾಯಿತಿ ಸದಸ್ಯ ಕಾವಲಿ ಶಿವಪ್ಪ ನಾಯಕ, ಮುಖಂಡರಾದ ಬಂಗಾರು ಹನುಮಂತು, ಬಿ.ಭೀಮೇಶ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾರತ್ನ ಮಹಿಳಾ ಕಲಾವಿದರ ಸಂಘದ ಅಧ್ಯಕ್ಷೆ ಎನ್. ಗೌರಮ್ಮ ವಹಿಸಿದ್ದರು.
ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷರಾದ ಡಾ.ಕಲ್ಲಯ್ಯಜ್ಜನವರ ಪಾದಪೂಜೆ ಹಾಗೂ ತುಲಾಭಾರವನ್ನು ಕಲಾರತ್ನ ಮಹಿಳಾ ಕಲಾವಿದರ ಸಂಘದ ದಿವ್ಯಕುಮಾರಿ,  ಜ್ಯೋತಿ,  ಹಾಗೂ ಇತರೆ ಪದಾಧಿಕಾರಿಗಳು, ಕಲಾವಿದರು ಸೇರಿ ಗಣ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪುರಸ್ಕೃತ ರಂಗ ಕಲಾವಿದೆಯರಾದ ಮರಿಯಮ್ಮನಹಳ್ಳಿ ನಾಗರತ್ನಮ್ಮ, ವಿರುಪಾಪುರ ಅಂಜಿನಮ್ಮ, ಹಿರಿಯ ರಂಗಕಲಾವಿದೆಯರಾದ ಸೋಗಿ ನಾಗರತ್ನಮ್ಮ, ಕೆ.ದುರುಗಮ್ಮ, ದುಶೀಲಾ, ರತ್ನಮ್ಮ, ವೀಣಾ, ಚಾಮುಂಡೇಶ್ವರಿ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಚಂದ್ರು,  ಸದಸ್ಯೆ ಡಾಣಿ ಚೌಡಮ್ಮ,  ಸಾಹಿತಿ ಭೀಮಣ್ಣ ಗಜಾಪುರ, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಸುರೇಶ್, ಮುಖಂಡರಾದ ಡಾಣಿ ರಾಘವೇಂದ್ರ, ನಲ್ಲಮುತ್ತಿ ದುರುಗೇಶ್, ಕಾಟಮಲ್ಲಿ ಕೊಟ್ರೇಶ್, ಕಲಾವಿದರಾದ ಸೂಲದಹಳ್ಳಿ ತಿಪ್ಪೇಸ್ವಾಮಿ, ನರಸಿಂಹಪ್ಪ, ಚಿಕ್ಕಜೋಗಿಹಳ್ಳಿ ನರಸಿಂಹಮೂರ್ತಿ, ಮೊರಬ ಮೇಳದ ವೀರಣ್ಣ, ಕಲಾರತ್ನ ಮಹಿಳಾ ಸಂಘದ ಎಂ.ಜ್ಯೋತಿ, ಸುಮಾ, ವೆಂಕಮ್ಮ, ಬಸಂತಿ  ಸೇರಿ ಇತರರಿದ್ದರು.
ಗಾಯಕ ತಿಮ್ಮನಹಳ್ಳಿ ನಿಂಗರಾಜ, ಸಂಗಪ್ಪ, ಸೋಮಶೇಖರಯ್ಯ, ತಿಂದಪ್ಪ ಸೇರಿ ಅನೇಕರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ವಿಜಯನಗರ, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ ಸೇರಿ ಇತರೆಡೆಗಳಿಂದ ಆಗಮಿಸಿದ್ದ ರಂಗಕಲಾವಿದರು, ಗಾಯಕರು, ಕಲಾ ಆರಾಧಕರನ್ನು ಕಲಾರತ್ನ ಮಹಿಳಾ ಕಲಾವಿದರ ಸಂಘದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಕಲ್ಲಯ್ಯಜ್ಜರ ಭಾವಚಿತ್ರವನ್ನು ಟ್ರ್ಯಾಕ್ಟರ್ ನಲ್ಲಿ  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು ಹಾಗೂ ವಾದ್ಯಗಳ ತಾಳಕ್ಕೆ ಕಲಾವಿದರ ಹೆಜ್ಜೆ ಹಾಕುವುದನ್ನು ನೋಡುಗರು ಕಣ್ಮನ ಸೆಳೆಯಿತು.
ಎಚ್.ಎಂ.ಪಂಪಯ್ಯ ನೇತೃತ್ವದ ತಂಡ ಪ್ರಾರ್ಥಿಸಿದರು , ಪತ್ರಕರ್ತರಾದ ಹುಡೇಂ ಕೃಷ್ಣಮೂರ್ತಿ ಸ್ವಾಗತಿಸಿದರು, ಕೆ.ಎಂ.ವೀರೇಶ್ ನಿರ್ವಹಿಸಿದರು. ಭೀಮಣ್ಣ ಗಜಾಪುರ ವಂದಿಸಿದರು.

ಬಾಕ್ಸ್ ಐಟಂ
 ಗವಾಯಿಗಳ ಆಶೀರ್ವಾದ ಎಲ್ಲರ ಮೇಲಿರಲಿ..
ಗದಗ ವೀರೇಶ್ವರ ಪುಣ್ಯಾಶ್ರಮದ ಪೂಜ್ಯರಾ ಪಂ.ಪಂಚಾಕ್ಷರಿ ಗವಾಯಿ ಮತ್ತು ಪಂ.ಪುಟ್ಟರಾಜ ಗವಾಯಿಗಳ ಆಶೀರ್ವಾದ ಎಲ್ಲರಿಗೂ ಲಭಿಸಲಿ.  ಅನಾಥರು, ಅಂದರಿಗೆ ಸಂಗೀತಾಭ್ಯಾಸ ಮಾಡಿಸಿ ಸ್ವಾವಲಂಬಿ ಜೀವನ ನಡೆಸಲು ಶ್ರೀ ವೀರೇಶ್ರಮ ಪುಣ್ಯಾಶ್ರಮ ಆಸರೆಯಾಗಿದೆ. ಇಂಥ ಪುಣ್ಯದ ಕೆಲಸಕ್ಕೆ ನೆರವಾಗುವ ತುಲಾಭಾರ ಕಾರ್ಯಕ್ರಮವನ್ನು ಕೂಡ್ಲಿಗಿ ಕಲಾರತ್ನ ಮಹಿಳಾ ಕಲಾವಿದರ ಸಂಘದವರು ನಡೆಸಿರುವುದು ಅತೀವ ಸಂತೋಷವಾಗಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧ್ಯಕ್ಷರಾದ ಡಾ. ಕಲ್ಲಯ್ಯಜ್ಜನವರು ಆಶೀರ್ವಚನದಲ್ಲಿ ತಿಳಿಸಿದರು. ರಂಗಭೂಮಿ ಕಲೆಯ ಮಹಿಳಾ ಕಲಾವಿದರ ಜೀವನ ತುಂಬಾ ಕಷ್ಟದಲ್ಲಿದ್ದರೂ ಎಲ್ಲರೂ ಸೇರಿ ವೀರೇಶ್ವರ ಪುಣ್ಯಾಶ್ರಮಕ್ಕೆ ಕಾಣಿಕೆ ನೀಡಿರುವುದು ಪುಣ್ಯದ ಕೆಲಸವಾಗಿದೆ. ಎಲ್ಲಾ ಕಲಾವಿದರ ಬದುಕು ಹಸನಾಗಲಿ, ನಾಡಿನಲ್ಲಿ ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು.

Attachments area