ಕಲಾವಿದರ ಗುರುತಿಸುವಿಕೆ, ಕಲಾಸ್ವಾದನೆ ಸುಸಂಸ್ಕೃತಿಯ ಲಕ್ಷಣ” 

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.೪; ಆಧುನಿಕ ಸಾಧನ ಸಲಕರಣೆಗಳ ಗಳಿಕೆ ಮತ್ತು ಬಳಕೆಯೇ  ಸಂಸ್ಕೃತಿಯ ಲಕ್ಷಣ ಎಂದು ಭಾವಿಸುವ ಈ ಕಾಲದಲ್ಲೂ ಎಲೆಮರೆಯ ಕಾಯಿಯಂತಿರುವ ಗ್ರಾಮೀಣ ಕಲಾವಿದರು ಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಿಜವಾಗಿಯೂ ಸುಸಂಸ್ಕೃತಿಯ ಲಕ್ಷಣ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.ಅವರು ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘದ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಾ ಪತ್ನಿ ವಿಯೋಗದಿಂದ ಧೃತಿಗೆಡದ ಎನ್ ಎಸ್ ರಾಜು ರವರು ಪ್ರಚಾರವಿಲ್ಲದ ಪ್ರತಿಭೆಗಳಾದ ಗ್ರಾಮೀಣ ಪ್ರದೇಶದ ಜಾನಪದ ಕಲಾವಿದರು ರಂಗಭೂಮಿ ಕಲಾವಿದರು ಮುಂತಾದವರನ್ನು ಗುರುತಿಸಿ ಗೌರವಿಸುವ, ಅವರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ದೊರಕಬೇಕಾದ ಕಾರ್ಯಕ್ರಮ ಅವಕಾಶ, ಪ್ರಶಸ್ತಿ ಪುರಸ್ಕಾರ ಮಾಸಾಶನಾದಿಗಳನ್ನು ಕೊಡಿಸುವ ಸಂಕಲ್ಪವನ್ನು ಮಾಡಿ ಆರಂಭಿಸಿದ ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘವು ಮೂರು ದಶಕಗಳಿಂದ ಕಾರ್ಯ ಗೈಯುತ್ತಿದ್ದು ಅರ್ಹ ಕಲಾವಿದರ ಸಂಪರ್ಕದ ಅನುಕೂಲಕ್ಕಾಗಿ ನಗರ ಮಧ್ಯಭಾಗದ ಪ್ರದೇಶವಾದ ನಿಟ್ಟುವಳ್ಳಿ ರಸ್ತೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ಸ್ಥಳಾಂತರಿಸಿರುವುದು ಎನ್ ಎಸ್ ರಾಜು ರವರ ಸೇವಾ ಕಳಕಳಿಯ ದ್ಯೋತಕವಾಗಿದೆ ಎಂದ ಎಚ್ ಬಿ ಮಂಜುನಾಥ   ಸ್ವತಹ ಕಲಾವಿದರೂ, ಬರಹಗಾರರೂ ಆಗಿರುವ ರಾಜುರವರು ಗೌತಮ ಬುದ್ಧ, ಬಸವೇಶ್ವರ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್ ರವರ ತತ್ವ ಚಿಂತನೆಗಳ ತಳಹದಿಯ ಮೇಲೆ ತಮ್ಮ ಸಾಂಸ್ಕೃತಿಕ ಸೇವಾ ಚಟುವಟಿಕೆಗಳನ್ನು ನಡೆಸುವ ಮನೋಭಾವ ಹೊಂದಿರುವುದು ಶ್ಲಾಘನೀಯ ಎಂದರು. ಆಹ್ವಾನಿತರಾಗಿ ಮಾತನಾಡಿದ ಎಂ ಎಸ್ ನಾಗರಾಜಪ್ಪನವರು ಡಿಜಿಟಲ್ ಯುಗದಲ್ಲಿ ಜಾನಪದವು ಮಾಸಬಾರದು ಎಂದರು. ಕೆ ಸಿ ಲಿಂಗರಾಜ್  ಮಾತನಾಡಿ ವಿದ್ಯಾರ್ಥಿಗಳಿಗೂ ಜಾನಪದ ಕಲೆಗಳ ಪರಿಚಯವಾಗಬೇಕು ಎಂದರೆ ಶಶಿಕಲಾ ಮೂರ್ತಿಯವರು ಮಾತನಾಡಿ ಗ್ರಾಮೀಣ ಕಲಾವಿದರು ಗಳಿಗೆ ಲಕ್ಷ ರೂಪಾಯಿಗಿಂತಾ ಅವರ ಕಲೆಗಳ ಬಗ್ಗೆ ನಾವು ಲಕ್ಷ್ಯ ಕೊಡುವುದು ಅವಶ್ಯ  ಎಂದರು.  ಹೊನ್ನೂರು ಮುನಿಯಪ್ಪ ಮಾತನಾಡಿ ಗ್ರಾಮೀಣ ಕ್ರೀಡೆಗಳು ನಶಿಸಬಾರದು ಎಂದರು.  ಪಲ್ಲಾಗಟ್ಟೆ ಚೆನ್ನಪ್ಪ, ಅರುಣ್ ಕುಮಾರ್ ಕುರುಡಿ, ಎಸ್ ಸಿದ್ದೇಶ ಕುರ್ಕಿ,ಡಾ.ಎ  ಶಿವನಗೌಡರು ಮುಂತಾದವರು ಮಾತನಾಡಿ ಸಂಘಕ್ಕೆ ಶುಭ ಕೋರಿದರು.  ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಲ್ ಹೆಚ್ ಅರುಣ್ ಕುಮಾರ್ ಸತ್ಸಂಗಗಳು ಎಲ್ಲಿ ನಡೆಯುತ್ತವೆಯೋ ಅಲ್ಲಿ ಸದ್ವಿಚಾರಗಳ ವಿನಿಮಯವಾಗುತ್ತದೆ, ಅಲಕ್ಷಿತ ಕಲಾವಿದರು ಗಳಿಗೆ ಕಾರ್ಯಕ್ರಮ ಒದಗಿಸಿ ಕೊಡುವುದು ಸಹಾ ಸತ್ಸಂಗದಷ್ಟೇ ಶ್ರೇಷ್ಠ ಎಂದರು. ಬಿ ಟಿ ಪ್ರಕಾಶ್,ಹಿರಿಯಪತ್ರಕರ್ತ  ಐರಣಿ ಬಸವರಾಜ್,  ಕೂಲಂಬಿ ಜಗದೀಶ್, ಅವರಗೆರೆ ಚಂದ್ರು,  ಕುಮಾರ ಆನೆಕೊಂಡ, ಕೂಲಂಬಿ  ಜಗದೀಶ್,  ಆವರಗೆರೆ ರುದ್ರಮುನಿ, ತಿಪ್ಪಣ್ಣ ಕತ್ತಲಗೆರೆ, ಮಾರ್ಥಂಡಪ್ಪ, ಬಿ ಈ ತಿಪ್ಪೇಸ್ವಾಮಿ, ಆರ್ ಸಿದ್ದೇಶಪ್ಪ, ಮಹಾನಗರ ಪಾಲಿಕಾ ಸದಸ್ಯ ಲತೀಫ್ ಸಾಬ್  ಮುಂತಾದವರು ಆಗಮಿಸಿದ್ದರು.  ಎನ್ ಎಸ್ ರಾಜು ಎಲ್ಲರನ್ನೂ ಸ್ವಾಗತಿಸಿ ವಂದನೆ ಸಮರ್ಪಿಸಿದರು.