ಕಲಾವಿದರ ಆರ್ಥಿಕ ನೆರವಿಗೆ ವಯೋಮಿತಿ ಸಲ್ಲದು

 ಸಾಣೆಹಳ್ಳಿ. ಜೂ.೧; ಕೊರೊನಾ ಹಾವಳಿಯಿಂದ ಕಳೆದ ಎರಡು ವರ್ಷಗಳಿಂದ ವಿಶ್ವದ ಜನರು ನರಕಯಾತನೆ ಅನುಭವಿಸುವಂತೆ ಆಗಿದೆ. ಅಂದಿನ ಅನ್ನವನ್ನ ಅಂದಿನ ಕಾಯಕದಿಂದಲೇ ಗಳಿಸುವಂತಹ ಕಲಾವಿದರು, ಕಾರ್ಮಿಕರು, ವಿವಿಧ ವೃತ್ತಿಯವರು ಅಂದರೆ ಕೌರಿಕರು, ಬಟ್ಟೆ ತೊಳೆಯುವವರು, ತರಗಾರರು ಹೀಗೆ ಹಲವು ವರ್ಗದ ಜನರು ತುಂಬಾ ನೋವನ್ನು ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಂಥ ಜನರಿಗೆ ಒಂದು ಹೊತ್ತಿನ ಅನ್ನವಾದರೂ ಸಿಗುವಂತೆ ಆಗಲಿ ಎಂದು ಆರ್ಥಿಕ ನೆರವು ನಿಡಲು ಮುಂದಾಗಿರುವುದು, ಹಣ ಬಿಡುಗಡೆ ಮಾಡಿರುವುದು ಅಭಿನಂದನಾರ್ಹ ಎಂದು ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು. ಇಂದು ರಂಗ ಕಲಾವಿದರು ತುಂಬಾ ಯಾತನೆ ಅನುಭವಿಸುತ್ತಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆ ಅವರಿಗೆ ಪರಿಹಾರ ವಿತರಿಸುವಲ್ಲಿ ಅನೇಕ ದಿಗ್ಬಂಧನ ವಿಧಿಸುತ್ತಿದೆ. `ದೇವರು ವರ ಕೊಟ್ಟರೂ ಪೂಜಾರಿ ವರಕೊಡಲಿಲ್ಲ’ ಅನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. 35 ವರ್ಷದ ಮೇಲಿನ ಕಲಾವಿದರಿಗೆ ಪರಿಹಾರ ನೀಡಬೇಕು ಎನ್ನುವ ನಿಯಮ ಮಾಡಿರುವುದು ತುಂಬಾ ಅವೈಜ್ಞಾನಿಕ. ನಮ್ಮ ರಂಗಶಾಲೆಗೆ ತರಬೇತಿ ಪಡೆಯಲು ಬರುವವರು ಎಸ್ ಎಸ್ ಎಲ್ ಸಿ ಪಾಸಾದವರು. ಅವರು ನಮ್ಮಲ್ಲಿ ಒಂದು ವರ್ಷ ತರಬೇತಿ ಪಡೆದು ಮರುವರ್ಷ `ಶಿವಸಂಚಾರ’ ಕಲಾವಿದರಾಗಿ ಕರ್ನಾಟಕದ ಒಳಹೊರಗೆ ಸುಮಾರು 150 ಪ್ರದರ್ಶನಗಳನ್ನು ಒಂದು ವರ್ಷದಲ್ಲಿ ಕೊಡುವರು. ತರಬೇತಿಯ ಅವಧಿಯಲ್ಲಿ ಮೂರು ಅಥವಾ ನಾಲ್ಕು ನಾಟಕಗಳಲ್ಲಿ ಅವರು ಅಭಿನಯಿಸುವರು. ಸಂಚಾರದಲ್ಲಿ ಮೂರು ನಾಟಕಗಳನ್ನು ಕಲಿತು ಎಲ್ಲೆಡೆ ಪ್ರದರ್ಶನ ಮಾಡುವರು. ಆದರೆ ಕಳೆದ ಎರಡು ವರ್ಷಗಳಿಂದ ಕಲಾವಿದರು ನಾಟಕ ಪ್ರದರ್ಶನ ನೀಡಲು ಸಾಧ್ಯವಾಗದ ಪರಿಸ್ಥಿತಿ ಕೊರೊನಾ ಕಾರಣದಿಂದ ನಿರ್ಮಾಣವಾಗಿದೆ. ಎಷ್ಟೋ ಕಲಾವಿದರು ರಂಗಭೂಮಿಯನ್ನೇ ಅವಲಂಬಿಸಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ನಮ್ಮಲ್ಲೇ ಎರಡು ವರ್ಷದ ಅವಧಿಯಲ್ಲಿ ಏಳು ನಾಟಕಗಳಲ್ಲಿ ಅಭಿನಯಿಸುವ ಕಲಾವಿದರು ಇಲ್ಲಿಂದ ಹೋಗಿ ತಮ್ಮದೇ ತಂಡ ಕಟ್ಟಿಕೊಂಡು ಅಥವಾ ಇತರರ ಜೊತೆ ಸೇರಿ ರಂಗಚಟುವಟಿಕೆಯಲ್ಲಿ ತೊಡಗಿಕೊಳ್ಳುವರು. ವರ್ಷದುದ್ದಕ್ಕೂ ಕ್ರಿಯಾಶೀಲರಾಗಿರ್ತಾರೆ. ಅವರು ರಂಗಶಾಲೆ ಸೇರಿದಾಗ ಬಹಳ ಎಂದರೆ 20 ವರ್ಷ. ಮುಂದೆ ನಾಲ್ಕಾರು ವರ್ಷ ರಂಗಭೂಮಿಯನ್ನೇ ನಂಬಿಕೊಂಡು ದುಡಿಯುತ್ತಾರೆ. ಆದರೂ ಅವರಿಗೆ 35 ವರ್ಷ ಆಗಿರುವುದಿಲ್ಲ. 35 ವರ್ಷದ ಮೇಲ್ಪಟ್ಟವರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದರೆ ಕಡಿಮೆ ವಯಸ್ಸಿರುವ ಕಲಾವಿದರು ಏನು ಮಾಡಬೇಕು? ಹಸಿವು ಎಲ್ಲರಿಗೂ ಒಂದೇ ಅಲ್ಲವೇ? ಈ ನೆಲೆಯಲ್ಲಿ ವಯಸ್ಸಿನ ದಿಗ್ಬಂಧನ ಹಾಕದೆ ಹತ್ತಾರು ನಾಟಕಗಳಲ್ಲಿ ಅಭಿನಯಿಸಿ ರಂಗಾಸಕ್ತಿಯನ್ನು ಉಳಿಸಿಕೊಂಡವರಿಗೆ ಬೇರೆ ಆದಾಯದ ಮೂಲಗಳು ಇಲ್ಲವಾದಲ್ಲಿ ಸಹಾಯ ಮಾಡುವ ನೇಮವನ್ನು ಜಾರಿಯಲ್ಲಿ ತರಬೇಕೆಂದು ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗೆ ಈ ಮೂಲಕ ಕಲಾವಿದರ ಪರವಾಗಿ ಒತ್ತಾಯಿಸಬಯಸುತ್ತೇವೆ. ಇವತ್ತು ಎಲ್ಲೂ ರಂಗ ಚಟುವಟಿಕೆಗಳನ್ನು ಮುಂದುವರಿಸಲು ಆಗುತ್ತಿಲ್ಲ. ರಂಗ ಕಲಾವಿದರು ಪ್ರತಿನಿತ್ಯ ದುಡಿದರೆ ಮಾತ್ರ ಅವರಿಗೆ ಅನ್ನ ಮತ್ತು ಬಟ್ಟೆ. ಸೋಮಾರಿಗಳಾದರೆ ಅನ್ನವೂ ಇಲ್ಲ, ಬಟ್ಟೆಯೂ ಇಲ್ಲ. ಕಳೆದ ಎರಡು ವರ್ಷಗಳಿಂದ ರಂಗಾಸಕ್ತಿ, ಅಭಿನಯ ಮಾಡುವ ಇಚ್ಛೆ ಇದ್ದರೂ ಅವರ ನಾಟಕಗಳನ್ನು ನೋಡಲು ಪ್ರೇಕ್ಷಕರು ಮುಂದೆ ಬರುವುದಿಲ್ಲ. ಶಿವಸಂಚಾರ ಕಳೆದ ಎರಡು ವರ್ಷಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನಗಳನ್ನು ಕೊಡಲು ಸಾಧ್ಯವಾಗಿಲ್ಲ. ನಾವು ಕಲಾವಿದರನ್ನು ಮೂರು ತಿಂಗಳು ಸಾಣೇಹಳ್ಳಿಯಲ್ಲಿಟ್ಟುಕೊಂಡು ಅವರಿಗೆ ಮೂರು ಅತ್ಯುತ್ತಮ ನಾಟಕಗಳನ್ನು ಮೂರು ನಾಲ್ಕು ಲಕ್ಷ ಹಣ ಖರ್ಚು ಮಾಡಿ ಕಲಿಸುತ್ತೇವೆ. ಆ ಮೂರು ತಿಂಗಳು ಕಲಾವಿದರಿಗೂ ಗೌರವ ಧನ ಕೊಡುತ್ತೇವೆ. ಆದರೆ ನಾಟಕಗಳನ್ನು ಆಹ್ವಾನಿಸಲು ಯಾರೂ ಮುಂದೆ ಬರುವುದಿಲ್ಲ. ನಾವೇ ಒತ್ತಾಯಿಸಿದರೆ ಕೊರೊನಾ ಎಂದು ಭಯ ವ್ಯಕ್ತಪಡಿಸುವರು. ಇತ್ತ ನಾವು ಸಹ ಆ ಕಲಾವಿದರಿಗೆ ಗೌರವ ಧನವನ್ನು ಕೊಡಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರೂ ನೆರವು ನೀಡುವುದಿಲ್ಲ. ಸರ್ಕಾರವೂ ಸಹಾಯ ಮಾಡುವುದಿಲ್ಲ ಎಂದರೆ ಆ ಕಲಾವಿದರ ಬದುಕು ದುರಂತಮಯ ಆಗದಿರಲು ಸಾಧ್ಯವೇ? ಸಂಗೀತ, ಜಾನಪದ, ರಂಗಭೂಮಿ ಹೀಗೆ ವಿವಿಧ ಕ್ಷೇತ್ರದ ಕಲಾವಿದರಿಗೆ ವಯಸ್ಸಿನ ದಿಗ್ಬಂಧನ ಹಾಕದೆ ಹತ್ತಕ್ಕಿಂತ ಹೆಚ್ಚು ನಾಟಕಗಳನ್ನು ಅಭಿನಯಿಸಿ ಇಗಲೂ ಕಲೆಯಿಂದಲೇ ಬದುಕು ಕಟ್ಟಿಕೊಳ್ಳುವವರಾಗಿದ್ದರೆ ಇಲಾಖೆ ಮತ್ತು ಸರ್ಕಾರ ಅವರಿಗೆ ಕೆಲವು ತಿಂಗಳವರೆಗಾದರೂ ಆರ್ಥಿಕ ನೆರವನ್ನು ನೀಡಬೇಕು. ವೃತ್ತಿರಂಗಭೂಮಿಯಲ್ಲಿ ಚಿಕ್ಕ ಮಕ್ಕಳಿರುವಾಗಲೇ ರಂಗಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ. 35 ವರ್ಷ ಆಗುವುದರೊಳಗೆ ಅವರು ಹಣ್ಣಾಗಿರ್ತಾರೆ. ಅಂಥವರಿಗೆ 35 ವರ್ಷಗಳ ನಂತರ ಪರಿಹಾರ ಕೊಡುತ್ತೇವೆ ಎಂದರೆ ಎಷ್ಟು ಅಮಾನವೀಯ ಮತ್ತು ಅತಾರ್ಕಿಕ ಎನ್ನುವುದನ್ನು ಇಲಾಖೆಯ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಎಲ್ಲರ ಜೀವನವೂ ಅಷ್ಟೇ ಮುಖ್ಯ. ವಿವಿಧ ವೃತ್ತಿಯಲ್ಲಿರುವ, ಆಯಾ ದಿನದ ದುಡಿಮೆಯಿಂದಲೇ ಬದುಕುವ ಜನರಿಗೆ ತುಂಬಾ ತೊಂದರೆ ಆಗಿದೆ. ಅವರಂತೆ ಕಲಾವಿದರು ಸಹ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಕಲಾವಿದರಿಗೆ ವಯಸ್ಸಿನ ದಿಗ್ಬಂಧನ ವಿಧಿಸದೆ ಸೂಕ್ತವಾದ ಆರ್ಥಿಕ ನೆರವು ನೀಡುವ ಕಾರ್ಯವನ್ನು ಮಾಡಬೇಕೆಂದು ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗೆ ಒತ್ತಾಯ ಮಾಡುತ್ತೇವೆ. ಎಷ್ಟೋ ಜನರಿಗೆ ಆನ್‌ಲೈನ್‌ನಲ್ಲಿ ಹೇಗೆ ಅರ್ಜಿ ತುಂಬುವುದು ಎನ್ನುವ ಪರಿಜ್ಞಾನ ಸಹ ಇರುವುದಿಲ್ಲ. ಅಂಥವರಿಗೆ ಆಯಾ ಜಿಲ್ಲೆಯ ಕನ್ನಡ ಸಂಸ್ಕೃತಿ ಇಲಾಖೆಯವರು ಅಥವಾ ನಮ್ಮಂಥ ಸಂಘಸAಸ್ಥೆಯವರು ಕಲಾವಿದ ಎನ್ನುವ ಪತ್ರವನ್ನು ಕೊಟ್ಟಾಗಲೂ ಆರ್ಥಿಕ ನೆರವು ದೊರೆಯುವಂತೆ ಆದರೆ ಸಾಮಾಜಿಕ ನ್ಯಾಯ ಒದಗಿಸಿದಂತೆ ಆಗುವುದು. ಈ ಬಗ್ಗೆ ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಗಂಭೀರ ಚಿಂತನೆ ನಡೆಸಿ ತಮ್ಮ ನಿಯಮಗಳನ್ನು ಬದಲಾಯಿಸಿ ಎಲ್ಲ ಕಲಾವಿದರಿಗೂ ಸಹಾಯ ಮಾಡಬೇಕೆಂದು ಕಲಾವಿದರ ಪರವಾಗಿ ಕಳಕಳಿಯಿಂದ ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.