ಕಲಾವಿದರು, ವಿಧವೆಯರ ಮಾಸಾಶನ ಬಿಡುಗಡೆ

ಮರಿಯಮ್ಮನಹಳ್ಳಿ, ಮೇ.20: ರಾಜ್ಯದಲ್ಲಿ ಕಷ್ಟದ ಪರಿಸ್ಥಿತಿಯಲ್ಲಿರುವ ಸಾಹಿತಿಗಳು, ಕಲಾವಿದರು, ವಿಧವೆಯರ ಮಾಸಾಶನವನ್ನು ಸರ್ಕಾರ ಬಿಡುಗಡೆಮಾಡಿದ್ದು, ಸಾಹಿತಿಗಳಿಗೆ ಹಾಗೂ ಕಲಾವಿದರ ಕುಟುಂಬದ ವಿಧವೆಯರ ಜೀವನಕ್ಕೆ ಆಸರೆಯಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ.ಮಂಜಮ್ಮ ಜೋಗತಿ ಕಲಾವಿದರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಕುರಿತು ಮಂಜಮ್ಮ ಜೋಗತಿ ಪತ್ರಿಕೆಯೊಂದಿಗೆ ಮಾತನಾಡಿ, ಕೋವಿಡ್‍ನಿಂದಾಗಿ ಕಲಾವಿದರ ಜೀವನ ಕಷ್ಟದಲ್ಲಿದ್ದು, ಈ ಬಗ್ಗೆ ಕನ್ನಡ ಮತ್ತುವ ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಮಾಸಾಶನ ಬಿಡುಗಡೆ ಮಾಡಿ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದೆ. ಇದಕ್ಕೆ ಸ್ಪಂದಿಸಿದ ಸಚಿವರು ಸರ್ಕಾರದ ಹಣಕಾಸು ಇಲಾಖೆಯಿಂದ ಒಟ್ಟು 25 ಕೋಟಿ ರೂಪಾಯಿಗಳಲ್ಲಿ ಮಂಜೂರು ಮಾಡಿ, ಮೊದಲ ಹಂತದಲ್ಲಿ 6 ಕೋಟಿ 25 ಲಕ್ಷರೂಪಾಯಿಗಳನ್ನು ಬಿಡುಗಡೆಗೊಳಿಸಿದೆ. ಇದರಿಂದ ರಾಜ್ಯದ ಕಲಾವಿದರಿಗೆ ಎರಡು ತಿಂಗಳ ಮಾಸಾಶನ ದೊರಕಿದೆ. ಲಾಕ್‍ಡೌನ್ ವೇಳೆ ಈ ಮಾಸಾಶನದಿಂದ ಅವರಿಗೆ ಸಹಾಯವಾಗಲಿದೆ. ಅಲ್ಲದೇ ಇದರಿಂದ ಎಷ್ಟೊಂದು ಕಲಾವಿದರಿಗೆ ಔಷಧೋಪಚಾರಕ್ಕೆ ದಿನಸಿ ಸಾಮಾನುಗಳನ್ನು ಖರೀದಿಗೆ ಅನುಕೂಲವಾಗಲಿದೆ ಎಂದರು.
ಫೋಟೋ