ಕಲಾವಿದರು ಆಧುನೀಕರಣಕ್ಕೆ ಹೊಂದಿಕೊಳ್ಳಬೇಕು: ಮಲ್ಲಿಕಾರ್ಜುನ್ ಶೆಟ್ಟಿ

ಕಲಬುರಗಿ, ನ.12: ಕಲಾವಿದರು ಆಧುನೀಕರಣಕ್ಕೆ ಹೊಂದಿಕೊಳ್ಳಬೇಕಾಗಿದೆ. ದೃಶ್ಯಕಲೆಯ ಪಯಣ ಆದಿ ಮಾನವನ ಕಾಲದಿಂದ ಇಂದಿನವರೆಗೆ ಬಹಳ ವಿಸ್ತಾರವಾಗಿ ಸಾಗಿ ಬಂದಿದೆ. ಈ ಕಲಾ ಪಯಣದಲ್ಲಿ ಕಲಾವಿದರು ತಾವು ಸೃಷ್ಟಿಸಿದ ಕಲಾಕೃತಿಗಳಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಅಪ್ಡೇಟ್ ಮಾಡಬೇಕಾಗಿದೆ ಎಂದು ಹಿರಿಯ ಕಲಾವಿದ ಮಲ್ಲಿಕಾರ್ಜುನ್ ಶೆಟ್ಟಿ ಅವರು ಹೇಳಿದರು.
ನಗರದ ರಂಗಾಯಣದಲ್ಲಿ ಶುಕ್ರವಾರ ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆಯು ಹಮ್ಮಿಕೊಂಡ 8ನೇ ವಾರ್ಷಿಕ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಕಲಾ ಕ್ಷೇತ್ರದ ವಿಸ್ತøತ ಅಭಿವೃದ್ಧಿಗೆ ಆಧುನೀಕರಣ ವ್ಯವಸ್ಥೆ ನೆರವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ್ ಅವರು ಮಾತನಾಡಿ, ಧಾರವಾಡದಲ್ಲಿ ಕೇಂದ್ರ ಲಲಿತಕಲಾ ಅಕ್ಯಾಡೆಮಿಯ ಪ್ರಾದೇಶಿಕ ಕೇಂದ್ರ ಆರಂಭಗೊಂಡಿದ್ದು, ಇದರಿಂದ ಕರ್ನಾಟಕದ ಚಿತ್ರ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಲಭಿಸಲಿವೆ. ಮತ್ತು ಬೆಂಗಳೂರಿನ ಕಲಾ ಗ್ರಾಮದಲ್ಲಿ ವಿಶಾಲವಾದ ಗ್ರಾಫಿಕ್ ಸ್ಟುಡಿಯೋ ಉದ್ಘಾಟನೆಯ ಹಂತದಲ್ಲಿದ್ದು, ಕಲಾವಿದರು ಆ ಸ್ಟುಡಿಯೋ ಸದುಪಯೋಗ ಪಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಮೂರು ದಿನಗಳ ಚಿತ್ರಕಲಾ ಶಿಬಿರವನ್ನು ಉದ್ಘಾಟಿಸಿದ ರಂಗಾಯಣದ ಆಡಳಿತಾಧಿಕಾರಿ ಜಗದೇಶ್ವರಿ ಅ. ನಾಶಿ ಅವರು ಮಾತನಾಡಿ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಮತ್ತು ಚಿತ್ರಕಲೆಗಳು, ಮಾಧ್ಯಮ ಬೇರೆ, ಬೇರೆಯಾದರೂ ಅಭಿವ್ಯಕ್ತಿಗೊಳ್ಳುವ ಭಾವನೆ ಒಂದೇ ಆಗಿರುತ್ತದೆ ಎಂದರು.
ಕರ್ನಾಟಕ ಶಿಲ್ಪಕಲಾ ಅಕ್ಯಾಡೆಮಿ ಸದಸ್ಯ ನಟರಾಜ್ ಶಿಲ್ಪಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶವು ಸನ್ನತಿಯಂತಹ ಶಿಲ್ಪಕಲಾ ಕೇಂದ್ರವನ್ನು ಹೊಂದಿದೆ. ಆದ್ದರಿಂದ ಈ ಭಾಗದ ಶಿಲ್ಪ ಕಲಾವಿದರು ಇಂತಹ ಕಲಾ ಪ್ರದರ್ಶನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ದೃಶ್ಯ ಬೆಳಕು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ್ ಪಿ., ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಕಲಾವಿದರಾದ ಡಾ. ಎ.ಎಸ್. ಪಾಟೀಲ್, ವಿ.ಬಿ. ಬಿರಾದಾರ್, ಬಾಬುರಾವ್ ಎಚ್., ಡಾ. ರೆಹಮಾನ್ ಪಟೇಲ್, ಲಕ್ಷ್ಮೀಕಾಂತ್ ಮನೋಕರ್ ಉಪಸ್ಥಿತರಿದ್ದರು. ನಯನಾ ಬಾಬುರಾವ್ ಅವರು ಕಾರ್ಯಕ್ರಮ ನಿರೂಪಿಸಿದರು.