ಕಲಾವಿದರಿಗೆ ಸರ್ಕಾರದ ನೆರವು ಬೇಕಿದೆ; ಗುರುಬಸವ ಶ್ರೀ

ಸಂಜೆವಾಣಿ ವಾರ್ತೆ

ದಾವಣಗೆರೆ.ಅ.೧೦; ಸರಕಾರ ಕಲಾವಿದರಿಗೆ ಸಹಾಯ ಒದಗಿಸಬೇಕು ಎಂದು ಪಾಂಡೋಮಟ್ಟಿ ಕಮ್ಮತ್ತಹಳ್ಳಿ ವಿರಕ್ತಮಠದ ಡಾ.ಗುರುಬಸವ ಸ್ವಾಮೀಜಿ ಹೇಳಿದರು.ಕರ್ನಾಟಕ ರಂಗ ಪರಿಷತ್, ಶ್ರೀ ಸ್ವಾಮಿ ವಿವೇಕಾನಂದ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಸಿಜಿಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾಜದಲ್ಲಿ ಬಹಳಷ್ಟು ಕಲಾವಿದರು ತೊಂದರೆಯಲ್ಲಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು.ಕಲೆಗೆ ತನ್ನದೇ ಆದ ಇತಿಹಾಸ ಹಾಗೂ ಪರಂಪರೆಯಿದೆ. ಅದನ್ನು ಅಳಿಸಲು ಸಾಧ್ಯವಿಲ್ಲ ಎಂದರು.ಸಿಜಿಕೆ  ರಂಗಕಲೆಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಅವರ ಹೆಸರಿನಲ್ಲಿ ಮಹಿಳೆಗೆ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ ಬಹಳಷ್ಟು ಕಲಾವಿದರು ಜೀವಂತ ಪ್ರಮಾಣ ಸಲ್ಲಿಸದ ಕಾರಣ ಮಾಸಾಶನ ತಡೆಹಿಡಿಯಲಾಗಿದೆ. ಸರಿಯಾದ ದಾಖಲಾತಿ ಸಲ್ಲಿಸಿದವರಿಗೆ ಮಾಸಾಶನಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.ಇನ್ಸೈಟ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪಠ್ಯಪುಸ್ತಕದ ಜತೆಗೆ ಕಲೆಯೂ ಮುಖ್ಯ. ಮಕ್ಕಳು ಶಾಲಾ ದಿನಗಳಲ್ಲೇ ಪಠ್ಯೇತರ ಚಟುವಟಿಕೆ ಮೂಲಕ ಸೃಜನಶೀಲತೆಗೂ ಒತ್ತು ನೀಡಬೇಕು ಎಂದು ತಿಳಿಸಿದರು.ಲಯನ್ಸ್ ಕ್ಲಬ್ ವಿದ್ಯಾನಗರ ಅಧ್ಯಕ್ಷ ಸಿ.ಎಚ್.ದೇವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾನವ ಸಂಘಜೀವಿ ಆಗಿರಬೇಕು. ಇದರಿಂದ ಹೆಚ್ಚು ಕ್ರಿಯಾಶೀಲರಾಗಿರಬಹುದು ಎಂದರು.ಕಸಾಪ ನಿಕಟಪೂರ್ವ ಅಧ್ಯಕ್ಷ ಎಚ್.ಎಸ್.ಮಂಜುನಾಥ ಕುರ್ಕಿ ಮಾತನಾಡಿ ಮನುಷ್ಯ ಸಮಾಜದಲ್ಲಿ ವೈಚಾರಿಕತೆ ಹಾಗೂ ಸೃಜನಶೀಲತೆಯಿಂದ ಬೆಳೆಯಬೇಕು. ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ವೈಯಕ್ತಿಕ ಪ್ರತಿಭಾವಂತಿಕೆಯೇ ಕಲಾವಿದರ ಉನ್ನತಿಗೆ ಕಾರಣವಾಗಿದೆ ಎಂದು ತಿಳಿಸಿದರು.ಸಿಜಿಕೆ ಪ್ರಶಸ್ತಿ ಸ್ವೀಕರಿಸಿದ ಕವಯಿತ್ರಿ ಎಚ್.ಕೆ.ಸತ್ಯಭಾಮಾ ಮಂಜುನಾಥ್ ಮಾತನಾಡಿ ಸಾಹಿತ್ಯ, ಕಲೆ ಹಾಗೂ ಸಂಗೀತ ಮನುಷ್ಯನ ಮನಸ್ಸಿಗೆ ದಿವ್ಯಾಷಧಗಳು. ಚಿಕ್ಕಂದಿನಲ್ಲೇ ನಾಟಕಗಳ ವೀಕ್ಷಣೆ ಮೂಲಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಒಲವು ಬೆಳೆಸಿಕೊಂಡಿದ್ದೇನೆ. ಸಿಜಿಕೆ ಅವರ ಹೆಸರಿನಲ್ಲಿ ಕೊಡಮಾಡಿರುವ ಪ್ರಶಸ್ತಿ ಸಂತೋಷ ತಂದಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಎಚ್.ಎನ್.ಶಿವಕುಮಾರ್ ಅವರ ‘ತಂತು ನಾನೇನ’ ಕಾದಂಬರಿ ಬಿಡುಗಡೆ ಗೊಳಿಸಲಾಯಿತು. ನೂರು ಜನ ಕಲಾವಿದರನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಬಸವತತ್ವ ಚಿಂತಕ ಎಚ್.ಎಸ್.ಮಲ್ಲಿಕಾರ್ಜುನಪ್ಪ, ಪಾಲಿಕೆ ಮಾಜಿ ಸದಸ್ಯ ಎಚ್.ಎನ್.ಶಿವಕುಮಾರ್ ಇದ್ದರು. ಪರಿಷತ್ ಉಪಾಧ್ಯಕ್ಷ ಎನ್.ಎಸ್.ರಾಜು ಸ್ವಾಗತಿಸಿದರು.