ಕಲಾವಿದರಿಗೆ ಶ್ರದ್ದೆ- ದೈವಕೃಪೆ ಮುಖ್ಯ; ಡಾ.ವಿ.ಟಿ.ಕಾಳೆ

ದಾವಣಗೆರೆ.ಜು.೨೫: ಕಲಾವಿದರಲ್ಲಿ‌ ಶ್ರದ್ಧೆ, ಪ್ರಾಮಾಣಿಕತೆ, ದೈವ ಕೃಪೆ ಇದ್ದರೆ ಸಾಧನೆ ಮಾಡಬಹುದು. ಕಲಾ ಕ್ಷೇತ್ರ ದೊಡ್ಡ ಸಾಗರ. ಯಾವುದೇ ಕಲಾವಿದ ನನಗೆ ಸಿದ್ದಿ ಆಗಿದೆ. ನಾನು ಕಲಾವಿದ ಅಗಿದ್ದೇನೆ ಎಂದು ಕೊಂಡರೆ ಅದು ಮೂರ್ಖತನ‌. ಏಕೆಂದರೆ ನಮ್ಮ ಕಲೆಗೆ ಇತರರು ಮನ್ನಣೆ ಕೊಟ್ಟಾಗ ಮಾತ್ರ ಕಲೆಗೆ ಬೆಲೆ ಸಿಗುತ್ತದೆ ಎಂದು ಹಿರಿಯ ಕಲಾವಿದ, ನಾಡೋಜ ಡಾ.ವಿ.ಟಿ.ಕಾಳೆ ಹೇಳಿದರು.ನಗರದ ವಿಶ್ವವಿದ್ಯಾಲಯ ದೃಶ್ಯ ಕಲಾ ಮಹಾವಿದ್ಯಾಲಯದ  ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಚಿತ್ರೋತ್ಸವ 2022 ಉದ್ಗಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಇಂದು ಕಲೆ ಅದ್ಭುತವಾಗಿ ಬೆಳೆದಿದೆ. ಈ ಹಿಂದೆ ಕರ್ನಾಟಕದಲ್ಲಿ ಕಲಾ ಶಾಲೆಗಳು ಇರಲಿಲ್ಲ. ನೆರೆ ರಾಜ್ಯಕ್ಕೆ ಹೋಗಿ ಕಲಿಯಬೇಕಿತ್ತು. ಆದರೆ ವಿಶಾಲ ಕರ್ನಾಟಕ ಆದನಂತರ ಹೆಚ್ಚು ಕಲಾ ಶಾಲೆಗಳು ಆಗಿವೆ. ಸಾಕಷ್ಟು ಸಂಖ್ಯೆಯಲ್ಲಿ ಕಲಾವಿದರು ರೂಪುಗೊಂಡಿದ್ದಾರೆ. ಅದರಲ್ಲೂ ದಾವಣಗೆರೆ ರಾಜ್ಯದಲ್ಲೇ ಎರಡನೇ ಉತ್ತಮ ಕಲಾ ಶಾಲೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.ಪ್ರತಿಯೊಬ್ಬ ತನ್ಮದೇ ಆದ ಕಲಾ ಪ್ರಕಾರಗಳನ್ನು ಬೆಳೆಸಿಕೊಳ್ಳಬೇಕು.‌ ಕಲಾವಿದನಿಗೆ ನಾನು ಅನ್ನುವ ಹಮ್ಮು ಬಿಮ್ಮು ಹೆಚ್ಚಾಗಿ ಇರುತ್ತದೆ. ಅಂತೆಯೇ ಅದು ನನ್ನಲ್ಲಿಯೂ ಇತ್ತು. ಆದರೆ ಇಂದು ಇಲ್ಲಿ ನಡೆದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಕಲೆಗಳನ್ನು ನೋಡಿ ನನ್ನಲ್ಲಿ ಇದ್ದ ಅಹಂ ದೂರವಾಗಿದೆ ಎಂದರು.ಕಾರ್ಯಕ್ರಮದ ಉದ್ಘಾಟನೆಯನ್ನು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾಡಿದರು. ವೇದಿಕೆಯಲ್ಲಿ ಡಾ.ಸತೀಶ್ ಕುಮಾರ್ ವಲ್ಲೇಪುರ, ಡಿ.ಹೇಮಾಲತಾ, ಡಾ.ವೆಂಕಟರಾವ್ ಎಂ.ಪಲಾಟೆ, ಡಾ.ಜೈರಾಜ್ ಎಂ.ಚಿಕ್ಕಪಾಟೀಲ್ ಇತರರು ಇದ್ದರು.