ಕಲಾವಿದರಿಗೆ ಮಾಶಾಸನ ಸೇರಿದಂತೆ ಇನ್ನಿತರ ಸೌಲಭ್ಯ ಒದಗಿಸಿಕೊಡಬೇಕು

ಕಲಬುರಗಿ:ಮಾ.27: ಕಲಾವಿದರಿಗೆ ಮಾಶಾಸನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಹಿರಿಯ ಕಲಾವಿದರಿಗೆ ಒದಗಿಸಿಕೊಡಬೇಕು. ಇದರಿಂದ ಅವರ ಆರ್ಥಿಕ ಗುಣಮಟ್ಟ ಸುಧಾರಣೆಗೆ ಸಹಕಾರಿಯಾಗಲಿದೆ. ರಂಗಭೂಮಿಯ ಹಿರಿಯ ಮತ್ತು ಕಿರಿಯ ಕಲಾವಿದರೆಲ್ಲರೂ ನಮ್ಮ ಕನ್ನಡ ನಾಡಿನ ಸಾಂಸ್ಕøತಿಕ ಲೋಕದ ರಾಯಭಾರಿಗಳಾಗಿದ್ದಾರೆ. ಅನೇಕ ದಶಕಗಳಿಂದ ರಂಗಭೂಮಿಯನ್ನೇ ನೆಚ್ಚಿಕೊಂಡೇ ಇದ್ದವರಿದ್ದಾರೆ. ಅಂಥ ರಂಗಭೂಮಿ ಕಲಾವಿದರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ಗೌರವಿಸುವ ಕಾರ್ಯಗಳು ಇಂದು ಹೆಚ್ಚೆಚ್ಚು ಆಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಬುಧವಾರ ಹಮ್ಮಿಕೊಂಡ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಮಾಜದಲ್ಲಿನ ಅನೇಕ ಸಮಸ್ಯೆಗಳಿಗೆ ರಂಗಭೂಮಿ ತನ್ನ ಪ್ರಯೋಗಗಳ ಮೂಲಕ ಪರಿಹಾರ ಕೊಟ್ಟಿದೆ. ರಂಗಭೂಮಿ ಕಲಾವಿದರು ವಯಕ್ತಿಕ ಬದುಕಿನಲ್ಲಿ ಅನೇಕ ಕಷ್ಟಗಳಿದ್ದರೂ ಅದನ್ನು ಬದಿಗೊತ್ತಿ ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಟ್ಟಿದ್ದಾರೆ ಎಂದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಹಿರಿಯ ನಾಟಕಕಾರ ಬಸವರಾಜ ಕೊಡೇಕಲ್ ಹಾಗೂ ಕಲಾವಿದ ಪ್ರಭುಲಿಂಗ ಕಿಣಗಿ ಮಾತನಾಡಿ, ನಾವೆಲ್ಲರೂ ಇಂದು ಟಿ.ವಿ. ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವುದರಿಂದ ನಾಟಕ ಮತ್ತಿತರ ರಂಗಕಲೆಗಳೆಡಗಿನ ಆಸಕ್ತಿ ಕ್ಷೀಣಿಸುತ್ತಿದೆ. ಹಾಗಾಗಿ ರಂಗ ಕಲೆ ಮತ್ತು ನಮ್ಮಂಥ ಕಲಾವಿದರನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಎಲ್ಲರೂ ಮಾಡಬೇಕೆಂದು ಮನವಿ ಮಾಡಿಕೊಂಡರು. ಪ್ರತಿಭಾವಂತ ಕಲಾವಿದರಿಗೆ ಸತ್ಕರಿಸಿ ಗೌರವಿಸುವ ಕಾರ್ಯ ಪರಿಷತ್ತು ಮಾಡಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಸಂತೋಷ ಕುಡಳ್ಳಿ, ಬಾಬುರಾವ ಪಾಟೀಲ, ರಾಜೇಂದ್ರ ಮಾಡಬೂಳ, ಸುರೇಖಾ ಮಹೇಶ ಜೇವರ್ಗಿ, ಪದ್ಮಾವತಿ ನಾಯಕ್, ಸೋಮಶೇಖರಯ್ಯಾ ಹೊಸಮಠ, ಬಸಯ್ಯಾ ಸ್ವಾಮಿ, ಶ್ರೀಕಾಂತ ಪಾಟೀಲ ತಿಳಗೂಳ, ಎಂ.ಎನ್. ಸುಗಂಧಿ, ಎಚ್.ಎಸ್.ಬರಗಾಲಿ, ಗುರುಲಿಂಗಪ್ಪ ಪಾಟೀಲ ಮೋಘಾ, ಸುರೇಶ ದೇಶಪಾಂಡೆ, ಗಣೇಶ ಚಿನ್ನಾಕಾರ, ಮಲ್ಲಿನಾಥ ಸಂಗಶೆಟ್ಟಿ, ಶಿವಾನಂದ ಪೂಜಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.


ಸಾಹಿತ್ಯದ ಪ್ರಕಾರಗಳಲ್ಲೊಂದಾದ ನಾಟಕ ಸಾಹಿತ್ಯವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿರುವ ನಾಟಕಕಾರರ ಜೀವನ ಮತ್ತು ಸಾಧನೆಯನ್ನು ಪರಿಷತ್ತಿನ ವತಿಯಿಂದ ಮುಂಬರುವ ದಿನಗಳಲ್ಲಿ ತಿಂಗಳಿಗೊಬ್ಬರಂತೆ `ನಾಟಕ ಲೋಕದಿ… ರಂಗಭೂಮಿಯ ಶೃಂಗ’ ಎನ್ನುವ ಘೋಷವಾಕ್ಯದೊಂದಿಗೆ ಪರಿಚಯಾತ್ಮಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

  • ವಿಜಯಕುಮಾರ ತೇಗಲತಿಪ್ಪಿ
    ಕಸಾಪ ಜಿಲ್ಲಾಧ್ಯಕ್ಷ