ಕಲಾವಿದರಿಗೆ ಪ್ರೋತ್ಸಾಹ ನೀಡಲು ದಾವಣಗೆರೆಯಲ್ಲಿ ಚಿತ್ರಸಂತೆ ಆಯೋಜನೆ ಶ್ಲಾಘನೀಯ

ದಾವಣಗೆರೆ, ಮಾ.3

ಫ್ರಾನ್ಸ್, ವಿಯೆನ್ನಾ ಕಲೆಗೆ ತುಂಬಾ ಪ್ರಸಿದ್ಧಿ ಪಡೆದ ದೇಶಗಳಾಗಿದ್ದು, ಅಲ್ಲಿಗೆ ಹೋಗಿ ನಮ್ಮ ಕಲಾವಿದರೂ ಆ ಶೈಲಿಯನ್ನು ತಿಳಿದುಕೊಳ್ಳಬೇಕು. ಅಲ್ಲಿನ ಕಲಾವಿದರು ರಸ್ತೆಯಲ್ಲೇ ಪ್ರವಾಸಿಗರ ಚಿತ್ರ ಬರೆದು ಕೊಡುವುದೂ ಗಮನಾರ್ಹಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.ನಗರದ ಅಕ್ಕಮಹಾದೇವಿ ರಸ್ತೆಯಲ್ಲಿ ದಾವಣಗೆರೆ ಚಿತ್ರಕಲಾ ಪರಿಷತ್ ಏರ್ಪಡಿಸಿದ್ದ ಚಿತ್ರಸಂತೆ-2024ನ್ನು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಲೆಗೆ ಫ್ರಾನ್ಸ್, ವಿಯೆನ್ನಾದಂತಹ ದೇಶಗಳಲ್ಲಿ ಸಿಗುವಂತಹ ಪ್ರೋತ್ಸಾಹವೇ ಆ ಕಲಾವಿದರ ಕಲಾಕೃತಿಗಳು ಪ್ರಸಿದ್ಧಿ ಪಡೆಯಲು ಕಾರಣ ಎಂದರು. ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ದಾವಣಗೆರೆ ಚಿತ್ರ ಸಂತೆ ಆಯೋಜಿಸಿದ್ದು ಉತ್ತಮ ಕಾರ್ಯ. ಬೆಂಗಳೂರು ಚಿತ್ರಸಂತೆ ಮಾದರಿಯಲ್ಲಿ ನಮ್ಮ ಊರಿನಲ್ಲೂ ಕಲಾವಿದರನ್ನು ಒಂದೆಡೆ ಸೇರಿಸಿ, ದಾವಣಗೆರೆ ಚಿತ್ರಸಂತೆಮಾಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಪರಿಷತ್‌ನಿಂದ ಮತ್ತಷ್ಟು ಒಳ್ಳೆಯ ಕೆಲಸಗಳಾಗಲಿ ಎಂದು ಅವರು ಹಾರೈಸಿದರು.ಕರ್ನಾಟಕದ ವಿವಿಧ ಜಿಲ್ಲೆಗಳಷ್ಟೇ ಅಲ್ಲದೇ ಅನ್ಯ ರಾಜ್ಯಗಳಿಂದಲೂ ಕಲಾವಿದರು ಚಿತ್ರಸಂತೆಗೆಬಂದಿದ್ದು ಸಂತೋಷದ ಸಂಗತಿ. ಅಕ್ಕ ಮಹಾದೇವಿ ರಸ್ತೆಯನ್ನು ಅಭಿವೃದ್ಧಿಪಡಿಸಿ, ಉದ್ಘಾಟಿಸಿದಾಗ ಇಲ್ಲೊಂದು ಆಹಾರ ಮೇಳ ಆಯೋಜನೆ ಮಾಡಿದ್ದೆವು. ಆಗಿನಿಂದಲೂ ಈ ರಸ್ತೆಯ ವೈಭವ ಇಮ್ಮಡಿಯಾಗುತ್ತಲೇ ಇದೆ. ಈಗ ಚಿತ್ರ ಸಂತೆಯಿಂದಾಗಿಯೂ ಅಕ್ಕ ಮಹಾದೇವಿ ರಸ್ತೆ ಮನೆ ಮಾತಾಗಿದೆ ಎಂದು ಅವರು ತಿಳಿಸಿದರು.ಚಿತ್ರ ಸಂತೆಗೆ ಭೇಟಿ ನೀಡಿದ್ದ ಬೆಂಗಳೂರು ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಐಜಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಕಲಾವಿದರೆಲ್ಲಾ ಶ್ರೀಮಂತರಿರುವುದಿಲ್ಲ. ಕಲೆಯನ್ನೇ ನಂಬಿ ಜೀವನ ಸಾಗಿಸುವವರೂ ಇರುತ್ತಾರೆ. ಅಂತಹವರಿಗೆ ಸೂಕ್ತ ಪ್ರೋತ್ಸಾಹ ಸಿಗಬೇಕು. ಬರೀ ಕಲಾಕೃತಿಗಳನ್ನು ನೋಡಿ ಆನಂದಿಸದೆ, ಖರೀದಿಸುವ ಮನಸ್ಸು ಬರಬೇಕು. ಇದರಿಂದ ಕಲಾವಿದರ ಹೊಟ್ಟೆಯೂ ತುಂಬುತ್ತದೆ, ಕಲೆಗೂ ಉತ್ತೇಜನ ಸಿಗುತ್ತದೆ ಎಂದು ಸಲಹೆ ನೀಡಿದರು.ಪರಿಷತ್ ಕಾರ್ಯದರ್ಶಿ ಡಿ.ಶೇಷಾಚಲ ಮಾತನಾಡಿ, ದಾವಣಗೆರೆಯಲ್ಲಿ ಅನೇಕ ದಶಕಗಳಿಂದ ಚಿತ್ರಕಲಾ ಕಾಲೇಜಿದ್ದರೂ ಇಲ್ಲಿ ಕಲಾಕೃತಿಗಳನ್ನು ಖರೀದಿಸುವ ಆಸಕ್ತಿ ಅಷ್ಟಾಗಿ ಇಲ್ಲ. ಚಿತ್ರಸಂತೆಗೆ ಬಂದು ಕಲಾಕೃತಿಗಳನ್ನು ನೋಡಿ ಮೆಚ್ಚಿಕೊಂಡು, ಖರೀದಿಸದೆ ಹೋಗುವವರ ಸಂಖ್ಯೆಯೇ ಹೆಚ್ಚು. ಈ ವರ್ಷದ ಚಿತ್ರಸಂತೆಯಲ್ಲಿ ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾವಿದರು ಆಗಮಿಸಿದ್ದಾರೆ. 60ಕ್ಕೂ ಅಧಿಕ ಸ್ಟಾಲ್ ವ್ಯವಸ್ಥೆ ಇದೆ. ಮುಂಬರುವ ದಿನಗಳಲ್ಲಿ ಚಿತ್ರಸಂತೆಯಿಂದ ಕಲಾವಿದರು ಮತ್ತು ಕಲಾಭಿಮಾನಿಗಳಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.ಉರಿ ಬಿಸಿಲಿನಲ್ಲಿ ಜನಸಂದಣಿ ಕೊಂಚ ಕಡಿಮೆ ಇದ್ದರೂ ಹೊತ್ತು ಇಳಿಯುತ್ತಿದ್ದಂತೆ ಚಿತ್ರಸಂತೆಗೆ ಬರುವವರ ಸಂಖ್ಯೆ ಹೆಚ್ಚಾಯಿತು. ಹಾಗೆ ಬಂದವರು ತಮಗಿಷ್ಟದ ಕಲಾಕೃತಿಗಳಿಂದ ಮನೆ ಅಲಂಕರಿಸಲು ಖರೀದಿಯಲ್ಲಿ ತೊಡಗಿದ್ದರು. ಇನ್ನೂ ಕೆಲವರು ಸ್ಥಳದಲ್ಲೇ ವ್ಯಕ್ತಿ ಚಿತ್ರ, ವ್ಯಂಗ್ಯ ಚಿತ್ರ ಬರೆಯುವ ಕಲಾವಿದರ ಮುಂದೆ ಕುಳಿತು ತಮ್ಮ ಚಹರೆಯು ರೇಖೆಗಳಲ್ಲಿ ಮೂಡಿಬರುವುದನ್ನು ಕುತೂಹಲದಿಂದ, ಬೆರಗುಗಣ್ಣುಗಳಿಂದ ನಿರೀಕ್ಷಿಸುತ್ತಿದ್ದರು. ಕೆಲವು ಮಳಿಗೆಗಳಲ್ಲಿ ಕಲಾ ಪರಿಕರ, ಕರಕುಶಲ ವಸ್ತುಗಳು ಕೂಡ ಮಾರಾಟಕ್ಕಿದ್ದವು. ಅಲ್ಲಲ್ಲಿ ಕಬ್ಬಿನ ಹಾಲು, ಪಾನಿಪುರಿ, ಮಜ್ಜಿಗೆ ಗಾಡಿಗಳೂ ಠಿಕಾಣಿ ಹೂಡಿ, ಭರ್ಜರಿ ವಹಿವಾಟು ನಡೆಸಿದವು.ಹಿರಿಯ ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ, ಪಾಲಿಕೆ ಸದಸ್ಯ ಜಿ.ಎಸ್.ಮಂಜುನಾಥ ಗಡಿಗುಡಾಳ್, ಪರಿಷತ್ ಅಧ್ಯಕ್ಷ ಡಿ.ಸಿ.ಶ್ರೀನಿವಾಸ್ ಚಿನ್ನಿಕಟ್ಟೆ, ನಿರ್ದೇಶಕರಾದ ಸದಾನಂದ ಹೆಗಡೆ, ಎಂ.ಅಶೋಕ್, ವಿಜಯ ಜಾಧವ್, ಗಣೇಶ್ ಆಚಾರ್, ಎಂ.ಎಸ್.ಚೇತನ್, ಶಾಂತಯ್ಯ ಪರಡಿಮಠ, ರವಿ ಹುದ್ದಾರ್ ಇತರರು ಹಾಜರಿದ್ದರು. ಹೊರಗಿನಿಂದ ಬಂದವರಿಗೆ ಪರಿಷತ್ತಿನಿಂದ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲಾಗಿತ್ತು. ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣ ಪತ್ರ, ಆಯ್ದ 9 ಉತ್ತಮ ಮಳಿಗೆಗಳಿಗೆ ನಗದು ಬಹುಮಾನ ನೀಡಲಾಯಿತು.