ಕಲಾವಿದರಿಗೆ ನೆರವಾದ ರಂಗಾಯಣ: ಮಾಳವಾಡ

ಧಾರವಾಡ,ಏ.19: ಕೊರೋನಾ ಮಹಾಮಾರಿಯಿಂದಾಗಿ ಕಲೆಯನ್ನೆ ಉಸಿರಾಗಿಸಿಕೊಂಡು ಬದುಕನ್ನು ನಡೆಸುತ್ತಿರುವ ಕಲಾವಿದರು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಯಿತು. ಇಂತಹ ಸಂದರ್ಭದಲ್ಲಿ ಧಾರವಾಡ ರಂಗಾಯಣವು ತನ್ನ ಕಾರ್ಯಚಟುವಟಿಕೆಗಳ ಮೂಲಕ ಕಲಾವಿದರಿಗೆ ನೆರವಾಗಿದೆ ಎಂದು ಕವಿಗಳಾದ ಎಮ್.ಎಸ್ ಮಾಳವಾಡ ಹೇಳಿದರು.
“ಆಜಾದಿ ಕಾ ಅಮೃತ ಮಹೋತ್ಸವ” ಅಂಗವಾಗಿ ರಂಗಾಯಣದ ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಾರಾಂತ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದರು. ರಂಗಾಯಣವು ತನ್ನ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಜನರನ್ನು ನಾಟಕಗಳತ್ತ ಗಮನಸೆಳೆದು ತನ್ನ ವ್ಯಾಪ್ತಿಯನ್ನು ವಿಸ್ತಾರಗೊಳಿಸಿಕೊಳ್ಳುತ್ತಿದೆ. ಅದರಂತೆ ಜಾನಪದ ರಂಗಭೂಮಿ ಕುರಿತ ನಾಟಕಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರನ್ನು ತಲುಪಿ, ನಮ್ಮ ದೇಶೀಯ ನಾಟಕಗಳನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್ ಕೊಪ್ಪದ ಮಾತನಾಡಿ, ರಮೇಶ ಪರವಿನಾಯಕ ಅವರು ರಂಗಾಯಣಕ್ಕೆ ನಿರ್ದೇಶಕರಾಗಿ ಬಂದ ನಂತರ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುವ ಮೂಲಕ ರಂಗಾಯಣಕ್ಕೆ ಹೊಸ ಮೆರುಗನ್ನು ತಂದಿದ್ದಾರೆ. ಅನೇಕ ಕಲಾವಿದರನ್ನು ಗುರುತಿಸಿ ಅವರನ್ನು ಗೌರವಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಿರುವುದು ಸಂತಸವಾಗಿದೆ ಎಂದು ಹೇಳಿದರು.

ರಂಗಾಯಣದ ನಿರ್ದೇಶಕರಾದ ರಮೇಶ ಎಸ್ ಪರವಿನಾಯ್ಕರ ಅಧ್ಯಕ್ಷತೆ ವಹಿಸಿದ್ದರು. ರಂಗಸಮಾಜದ ಸದಸ್ಯರಾದ ಹಿಪ್ಪರಗಿ ಸಿದ್ಧರಾಮ, ನಾಟಕ ನಿರ್ದೇಶಕರಾದ ಗಣಪತಿ ಹೆಗಡೆ ಮೂಲಿಮನೆ ಸೇರಿದಂತೆ ಇತರರು ಇದ್ದರು.. ಫಕ್ಕಿರೇಶ ಮಾಧನಬಾವಿ ಕಾರ್ಯಕ್ರಮ ನಿರೂಪಿಸಿದರು.

ಶಿವಮೂರ್ತಿ ನಂದನಹೊಸೂರು ರಚಿಸಿ, ಗಣಪತಿ ಹೆಗಡೆ ಮೂಲಿಮನೆ ನಿರ್ದೇಶಿಸಿದ ಅಂಧಕಾರ ನಾಟಕವನ್ನುಧಾತ್ರಿ ರಂಗಸಂಸ್ಥೆ, ಬಳ್ಳಾರಿ ರಂಗಸೌಗಂಧ ಸಿದ್ದಾಪುರ (ಉ.ಕ) ಕಲಾವಿದರು ಪ್ರದರ್ಶಿಸಿದರು.