ಕಲಾವಿದರಿಗೆ ಕಷ್ಟಗಳು ಸರ್ವಕಾಲಿಕ – ಡಾ.ಶಿವಕುಮಾರ ತಾತ

ಸಿರುಗುಪ್ಪ ಮಾ 28 : ರಂಗಭೂಮಿಯಲ್ಲಿ ಮಹಾರಾಜನಂತೆ ಮೆರೆದ ಮಹಾನ್ ಕಲಾವಿದರು ಕೊನೆಗಾಲದಲ್ಲಿ ಒಂದ್ಹೊತ್ತಿನ ಊಟಕ್ಕೂ ಗತಿಯಿಲ್ಲದೆ ತುಂಡು ಬೀಡಿ ಸೇದಿ ಹೊಟ್ಟೆ ತುಂಬಿಸಿಕೊಂಡು,ಕೊನೆಗೆ ನಡುಬೀದಿಯಲ್ಲಿ ಅನಾಥ ಹೆಣವಾಗಿ ಹತರಾದ ಅನೇಕ ಉದಾಹರಣೆಗಳು ನಮ್ಮ ನಡುವೆ ಬಹಳಷ್ಟಿವೆ.ಹೀಗಾಗಿಯೇ ಬಣ್ಣವರಸಿ ಬಂದವನಿಗೆ ಕಷ್ಟಗÀಳು ಅನಾವರತ ಎಂದು ಡಾ.ಶಿವಕುಮಾರ ತಾತ ಕುಡುದರಹಾಳ್ ಅಭಿಪ್ರಾಯ ಪಟ್ಟರು.
ತಾಲೂಕಿನ ಕೊತ್ತಲಚಿಂತ ಗ್ರಾಮದ ಶ್ರೀಹನುಮಂತಾವಧೂತರ ಮಠದಲ್ಲಿ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ ಸಂಸ್ಥೆಯು ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರಂತ ರತ್ನ ಪ್ರಶಸ್ತಿ-2019 – ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತಾನಾಡಿ ರಂಗಭೂಮಿಯು ಎಲ್ಲ ಮಡಿವಂತಿಕೆಗಳಿಂದ ದೂರವಿರುವ ಕಾರಣವೇ ಅದು ಬಹುಬೇಗ ಜನರ ಎದೆಯೊಳಗೆ ಹೊಕ್ಕುಬಿಡುತ್ತದೆ.
ಅಲ್ಲದೇ ಇದಕ್ಕೆ ಎಲ್ಲರ ಮನೆಯೊಳಗೆ ಜಾಗ ಸಿಕ್ಕರೂ, ಬಹುತೇಕರ ಮನೆಯಿಂದ ಮಾತ್ರ ದೂರ.ಸಮಾಜದಲ್ಲಿ ಅನೇಕರು ತಮ್ಮ ಮಕ್ಕಳು ತಮ್ಮಂತೆ ಆಗಲೆಂದು ಇಚ್ಚಿಸುತ್ತಾರೆ ಆದರೆ ಒಬ್ಬ ಕಲಾವಿದನು ಮಾತ್ರ ತನ್ನ ಮಕ್ಕಳು ತನ್ನಂತಾಗಲು ಇಚ್ಚಿಸುವುದಿಲ್ಲ. ಕಾರಣ ಅನಾಧಿ ಕಾಲದಿಂದಲೂ ಸಮಾಜದಲ್ಲಿ ಕಲೆಗೆ ಸೂಕ್ತ ಬೆಲೆ ಸಿಗದಿರುವುದೇ ಆಗಿದೆ. ಮುಂಬರುವ ದಿನದಲ್ಲಾದರೂ ಕಲೆಗೂ ಕಲಾವಿದರಿಗೂ ಎಲ್ಲರಿಂದಲೂ ಮನ್ನಣೆ ದೊರೆಯಲೆಂಬುದೇ ನನ್ನ ಅಶಯವೆಂದರು. ನಂತರ ಗಮಕಿ ಕೆ.ವೆಂಕಟರೆಡ್ಡಿ ಮಿಟ್ಟೆಸೂಗೂರು ಮಾತಾನಾಡಿ ನಮ್ಮ ಸಿರುಗುಪ್ಪ ಕಲಾ ಸಂಪತ್ತಿನಿಂದ ಕೂಡಿದೆ ಇಲ್ಲಿ ಎಲಿವಾಳ ಸಿದ್ದಯ್ಯರಿಂದ ಹಿಡಿದು ಇಂದಿನ ಶಿವಕುಮಾರ ತಾತನವರ ತನಕ ಅನೇಕ ರಂಗ ದಿಗ್ಗಜರನ್ನು ಹೊಂದಿದೆ.ಆದರೆ ಇದುವರೆಗೂ ಎಲ್ಲೂ ನಮ್ಮ ಭಾಗದ ಕಲಾವಿದರಿಗೆ ಯಾವ ಪುರಸ್ಕಾರ ದೊರೆಯದಿರುವುದು ವಿಷಾಧನೀಯವಾಗಿದೆ ಎಂದರು.
ರಂಗ ಸಂಶೋಧಕ ಆರ್.ಪಿ.ಮಂಜುನಾಥ್ ಈ ವರ್ಷದ ಇಂಗ್ಲೇಂಡಿನ ಹೆಲೆನ್ ಮರ್ರೆನ್‍ರ ವಿಶ್ವ ರಂಗಭೂಮಿ ಸಂದೇಶ ಓದುತ್ತಾ 1961 ರಲ್ಲಿ ವಿಶ್ವದ ರಂಗಕಲಾವಿದರೆಲ್ಲ ಸೇರಿ ಐ.ಟಿ.ಐ (ಇಂಟರ್ ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್) ಯನ್ನು ಪ್ಯಾರಿಸ್‍ನಲ್ಲಿ ಸ್ಥಾಪಿಸಿದರು. ಅಲ್ಲದೇ 1962 ರಿಂದ ಇಲ್ಲಿಯವರೆಗೂ ದೇಶ, ಭಾಷ ಭೇದವಿಲ್ಲದೆ ವಿಶ್ವದ ಪ್ರಸಿದ್ಧ ರಂಗಕರ್ಮಿಯೊಬ್ಬರಿಂದ ರಂಗಭೂಮಿ ಸಂದೇಶ ಬರೆಸಿ ಜಗಜ್ಜಾಹೀರು ಮಾಡಿ ಅದರ ವಾಚನದ ನಂತರ ಪ್ರತಿ ಮಾರ್ಚ್ 27 ರಂಗಭೂಮಿ ದಿನವನ್ನಾಗಿ ಆಚರಿಸಲಾಗುತ್ತದೆ. ಅಂತೆಯೇ ಇನ್ಮುಂದೆ ಪ್ರತಿವರ್ಷ ಈ ದಿನದಂದೇ ರಂಗಕರ್ಮಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ದಮ್ಮ ತಂಡದಿಂದ ಗೊರವರ ಕುಣಿತ, ಪಲ್ಲವಿ ತಂಡದಿಂದ ಕೋಲಾಟ ಹಾಗೂ ಶರಣಬಸವಸ್ವಾಮಿ ತಂಡದಿಂದ ಆರ್.ಪಿ.ಮಂಜುನಾಥ್ ರಚನೆ, ನಿರ್ದೇಶನದ ಆಗೋದೆಲ್ಲಾ ಒಳ್ಳೆಯದಕ್ಕೆ ನಾಟಕ ಪ್ರದರ್ಶಿಸಲಾಯಿತು.
ಇದೇ ಸಂದರ್ಭದಲ್ಲಿ ಪಂಪಾರೆಡ್ಡಿ ಕೊತ್ತಲಚಿಂತ ಸ್ಥಳೀಯ ಕಲಾವಿದರಾದ ವಯಲಾನ್ ಮಾಂತ್ರಿಕ ಎಂ.ಎಂ.ಕಿರವಾಣಿಯ ಗುರುಗಳಾದ ಅಗಸನೂರು ದತ್ತಪ್ಪ, ನಾಡಂಗ ಮರಿಸ್ವಾಮಿ, ಬಿ.ಜಿ.ದಿನ್ನೆ ನರಸನಗೌಡ, ಸೂಗೂರಪ್ಪ, ಬೀರಳ್ಳಿ ರಾಮರೆಡ್ಡಿ ಇನ್ನೂ ಮುಂತಾದವರನ್ನು ಸ್ಮರಿಸಿದರು.
ಹೆಚ್.ಕೆ.ನರಸನಗೌಡ, ಪಿ.ವೀರೇಶಗೌಡ, ನಾಗನಗೌಡ, ಸತ್ಯ ನಾರಾಯಣ ರೆಡ್ಡಿ, ಸಾಬೇಶ್, ವೆಂಕಟರೆಡ್ಡಿ, ಮರಿಸ್ವಾಮಿ, ವೀರಬಸವ ಮುಂತಾದವರು ಭಾಗವಹಿಸಿದ್ದರು.