ಸಂಜೆವಾಣಿ ವಾರ್ತೆ
ಸಂಡೂರು:ಜು: 12: ವೃತ್ತ ರಂಗಭೂಮಿಯ ಕಲಾವಿದರು ಬಹಳಷ್ಟು ಕಷ್ಟಗಳನ್ನು ಅನುಭವಿಸುವಂತಹ ಸ್ಥಿತಿ ಉಂಟಾಗಿದೆ, ಕಾರಣ ಮೊಬೈಲ್ ಮತ್ತು ದೂರದರ್ಶನದಿಂದ ಕಲಾ ಪ್ರೇಮಿಗಳು ನಾಟಕ ನೋಡಲು ಅಗಮಿಸದೇ ಇರುವುದು ಸಂಕಷ್ಟಕ್ಕೆ ಕಾರಣವಾಗುತ್ತಿದ್ದು ಸಂಡೂರಿನ ಕಲಾ ಪ್ರೇಮಿಗಳು ಉತ್ತಮ ಪ್ರೋತ್ಸಾಹ ನೀಡುತ್ತಿದ್ದು ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಲಿ ಎಂದು ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್ ಇವರ ಸಹಯೋಗದಲ್ಲಿ ಶ್ರೀ ಸಿದ್ದಲಿಂಗೇಶ್ವರ ನಾಟಕ ಸಂಘ, ಮಂಡಲಗಿರಿ ಮಾಲೀಕರಾದ ಮಮತಾಶ್ರೀ ತಿಳಿಸಿದರು.
ಅವರು ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿ ನಾಟಕ ರಂಗಸ್ಥಳದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ನಾಟಕ ಕಲಾವಿದರು ಬಹಳಷ್ಟು ಶ್ರಮವಹಿಸಿ ಕಲೆಯನ್ನು ಪ್ರದರ್ಶನ ಮಾಡುತ್ತೇವೆ ಅದರೆ ಅಧುನಿಕ ಮಾದ್ಯಮಗಳಿಂದ ನಾಟಕಕ್ಕೆ ಬರುವವರೇ ಇಲ್ಲವಾಗುತ್ತಿದೆ ಅದ್ದರಿಂದ ಸಂಡೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಚಾಲಕರಾದ ಶ್ರಿಧರ ಹೆಗಡೆ ಮಾತನಾಡಿ ಕರೋನಾದ ಸಂದರ್ಭದಲ್ಲಿ ಕಲಾವಿದರ ಬದುಕು ಬೀದಿಗೆ ಬಿದ್ದಿತ್ತು, ಈಗ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದೇವೆ, ಒಂದು ಸ್ಥಳದಲ್ಲಿ ಕನಿಷ್ಠ 4 ತಿಂಗಳಾದರೂ ನಾಟಕ ಪ್ರದರ್ಶನ ಮಾಡಬೇಕು ಎನ್ನುವ ಆಸೆಯಿಂದ ಅಗಮಿಸಿದ್ದೇವೆ, ಅದಕ್ಕೆ ಪ್ರೋತ್ಸಾಹ ಅತಿ ಅಗತ್ಯವಾಗಿದೆ, ಸಂಡೂರಿನ ಎಲ್ಲಾ ಅಧಿಕಾರಿಗಳು, ಉತ್ತಮ ರೀತಿಯಲ್ಲಿ ಸ್ಪಂದಿಸಿ ಪರವಾನಿಗೆ ನೀಡಿದ್ದಾರೆ, ಕಲಾವಿದರೆ ಕಟ್ಟಿದ ಈ ಕಂಪನಿ ವೃತ್ತಿ ರಂಗಾಯಣದ ಕಲಾವಿದರೇ ಇದರ ಬೆನ್ನೆಲುಬು, ಕನಿಷ್ಠ 35 ಕುಟುಂಬಗಳು ಈ ಕಂಪನಿಯಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ, ದಿನಕ್ಕೆ 2 ಶೋಷಗಳನ್ನು ನಡೆಸುತ್ತಿದ್ದೇವೆ, ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ, 17 ಜನ ಕಲಾವಿದರು ಉತ್ತಮ ತರಬೇತಿ ಪಡೆದು ಪ್ರದರ್ಶನ ನೀಡುತ್ತಿದ್ದಾರೆ, ಕಣ್ಮರೆಯಾಗುತ್ತಿರುವ ನಾಟಕ ಕಲೆ ಉಳಿಯಬೇಕು, ಕಲಾವಿದರ ಬದುಕು ಹಸನಾಗಬೇಕು ಎಂದರೆ ಎಲ್ಲರ ಸಹಕಾರ ಅತಿ ಅಗತ್ಯ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಡೂರಿನ ಕಲಾವಿದರು, ನಾಟಕ ಪ್ರೇಮಿಗಳು, ಸ್ಕೌಟ್ಸ್ – ಗೈಡ್ಸ್ ಕಾರ್ಯದರ್ಶಿ ಜಿ.ಎಸ್. ಸೋಮಪ್ಪ ಅವರು ಉಪಸ್ಥಿತರಿದ್ದು ನಾಟಕ ಕಲೆಯನ್ನು ನೋಡುವ ಮೂಲಕ ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಲಾವಿದರಾದ ಬಸವರಾಜ ಪಂಚಗಲ್, ಮಾರುತಿ ಗದಗ್, ಬಸವರಾಜ ಪತ್ತಾರ್, ನೇತ್ರಾವತಿ ಅರಳಿಹಳ್ಳಿ, ವಿಜಯಕುಮಾರ ಹೆಗಡೆ, ವಾಣಿಶ್ರೀ, ಅನಂದ, ಕಂಪನಿಯ ನಿರ್ವಾಹಣೆ ಮಾಡುವ ಕುಮಾರ ಶಂಕರ್ ಅರಳಿಹಳ್ಳಿ ಉಪಸ್ಥಿತರಿದ್ದರು, ಅಲ್ಲದೆ ಸ್ಥಳವನ್ನು ಉಚಿತವಾಗಿ ನೀಡಿದ ಸಂಡೂರಿನ ಕೆ.ಎಸ್. ಶಿವಪ್ಪ ಅವರಿಗೆ ಧನ್ಯವಾದಗಳನ್ನು ಸಹ ಅರ್ಪಿಸಿದರು.