ಕಲಾವಿದರಿಗೆ ಅನುದಾನ ತಾರತಮ್ಯ: ನಾಳೆ ಪ್ರತಿಭಟನೆ

ಬೆಂಗಳೂರು,ಜೂ.೧೨:
ಅನುದಾನ ವಿತರಣೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ತಾರತಮ್ಯ ಧೋರಣೆ ಖಂಡಿಸಿ ಕನ್ನಡ ಜಾಗೃತಿ ವೇದಿಕೆ ಜೂ. ೧೩ ರಂದು ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದೆ.
ಕಲೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘ-ಸಂಸ್ಥೆಗಳಿಗೆ ಸರ್ಕಾರ ವಾರ್ಷಿಕ ಅನುದಾನ ವಿತರಿಸುತ್ತಿದೆ. ಆದರೆ, ಅಧಿಕಾರಿಗಳ ತಾರತಮ್ಯ ಧೋರಣೆಯಿಂದ ಸಂಘ-ಸಂಸ್ಥೆಗಳು ಅನುದಾನದಿಂದ ವಂಚಿತಗೊಳ್ಳುತ್ತಿವೆ. ವಾರ್ಷಿಕ ೪ ಸಾವಿರಕ್ಕೂ ಅಧಿಕ ಸಂಘ-ಸಂಸ್ಥೆಗಳು ಅನುದಾನಕ್ಕೆ ಅರ್ಜಿ ಅನುಸರಿಸುತ್ತಿವೆ. ಆದರೆ, ೩ ಸಾವಿರ ಸಂಘ-ಸಂಸ್ಥೆಗಳಿಗೆ ಅನುದಾನ ದೊರಕುತ್ತಿದೆ ಎಂದು ಕನ್ನಡ ಜಾಗೃತಿ ವೇದಿಕೆ ಪ್ರತಿಭಟನೆ ಸಂಚಾಲಕ ಡಾ. ಜಯಸಿಂಹ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
೨೦೨೨ರಲ್ಲಿ ಅನುದಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ೨೦೨೩ರ ಮಾರ್ಚ್‌ವರೆಗೂ ಅರ್ಜಿ ಪರಿಶೀಲನಾ ಪ್ರಕ್ರಿಯೆ ನಡೆಯಲಿಲ್ಲ. ಈ ಅನುದಾನವನ್ನು ಮಂಜೂರು ಮಾಡದಿದ್ದರೆ ಅನುದಾನ ವಾಪಸ್ ಸರ್ಕಾರಕ್ಕೆ ಹೋಗಲಿದೆ ಎಂದು ಅನುದಾನ ವಂಚಿತ ಕಲಾವಿದರು ಆರೋಪಿಸಿದ್ದಾರೆ.
ಕೆಲ ಸಂಘ-ಸಂಸ್ಥೆಗಳಿಗೆ ಕಡಿಮೆ ಅನುದಾನ ಶಿಫಾರಸ್ಸು ಮಾಡಿದ್ದರೂ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಬೆಳಗಾವಿ, ಕಾರವಾರ ಸೇರಿದಂತೆ ಹಲವು ಜಿಲ್ಲೆಗಳಿಗೆ ಇದುವರೆಗೂ ಅನುದಾನ ಬಿಡುಗಡೆ ಮಾಡಲಾಗಿಲ್ಲ. ಕಲಾವಿದರಿಗೆ ಅನುದಾನ ಬಿಡುಗಡೆ ಮಾಡದೆ ನಿರ್ಲಕ್ಷಿಸುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೇಜವ್ದಾರಿಯಿಂದ ವರ್ತಿಸಿದೆ ಎಂದು ಆರೋಪಿಸಿರುವ ಕಲಾ ಸಂಘಟಕ ಡಾ. ಜಯಸಿಂಹ ಅನುದಾನ ತಾರತಮ್ಯ ಧೋರಣೆ ಹಾಗೂ ವಿತರಣೆಯಲ್ಲಿನ ವಿಳಂಬ ಕುರಿತಂತೆ ಸೂಕ್ತ ತನಿಖೆಯಾಗಬೇಕು. ಈ ನಿಟ್ಟಿನಲ್ಲಿ ೧೩ ರಂದು ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.