
ಚಿತ್ರದುರ್ಗದ ಹರ್ತಿಕೋಟೆಯ ಪಟೇಲ್ ರುದ್ರಪ್ಪ ತಿಪ್ಪೇಸ್ವಾಮಿ ಕನ್ನಡ ನಾಡಿನಲ್ಲಿ ಆಗಿ ಹೋದ ಅಪೂರ್ವ ಜಲವರ್ಣ ಚಿತ್ರಕಾರರುಗಳಲ್ಲಿ ಒಬ್ಬರು. ಪಿ ಆರ್ ಟಿ ಎಂದೇ ನಾಡಿನ ದೃಶ್ಯ ಕಲಾವಲಯದಲ್ಲಿ ಜನಪ್ರಿಯರಾಗಿರುವ ಅವರದು ಬಹುಮುಖ ಪ್ರತಿಭೆ. ಜಾನಪದಕ್ಷೇತ್ರ,ಹಳೆಯ ವಸ್ತುಗಳನ್ನು ಸಂಗ್ರಹಿಸುವಿಕೆ,ದೃಶ್ಯ ಕಲಾಸಾಹಿತ್ಯ ರಚನೆ ಇವುಗಳಲ್ಲೂ ಸಹ ಸಮಾನ ಆಸಕ್ತಿ ಅವರಿಗಿತ್ತು. ಪಟೇಲುಗಾರಿಕೆಯ ಮನೆತನದವರಾದ ಇವರ ತಂದೆ-ರುದ್ರಪ್ಪ, ತಾಯಿ-ಲಕ್ಕಮ್ಮ.1926ರಿಂದ2000ದ ವರೆಗೆ ಬದುಕಿದ್ದ ಈ ಹಿರಿಯ ಸಾಧಕರು ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾಶಾಲೆಯಲ್ಲಿ ಎಸ್ ಎಸ್ ಕುಕ್ಕೆ,ಎಸ್. ಆರ್. ಐಯ್ಯಂಗಾರ್, ಪಾವಂಜೆ ಮೊದಲಾದ ಹೆಸರಾಂತ ಕಲಾವಿದರುಗಳ ಮಾರ್ಗದರ್ಶನದಲ್ಲಿ ಚಿತ್ರ ಕಲಾಭ್ಯಾಸ ನಡೆಸಿ, ನಾಡಿನಾದ್ಯಂತ ಸಂಚರಿಸಿ ಪ್ರೇಕ್ಷಣೀಯ ತಾಣಗಳನ್ನು ತಮ್ಮ ಕಲಾತ್ಮಕ ಕುಃಚಗಳ ಮೂಲಕ ಹಾಳೆಯ ಮೇಲೆ ಜಲವರ್ಣದಲ್ಲಿ ಅಭಿವ್ಯಕ್ತಿಸುತ್ತ ಒಳ್ಳೆಯ ನಿಸರ್ಗ ಚಿತ್ರ ಕಾರರಾಗಿ ಹೆಸರು ಮಾಡಿದರು. ತನ್ಮಧ್ಯೆ ಜಾನಪದ, ಅಧ್ಯಯನ,ಹಳೆಯ ವಸ್ತು-ಪರಿಕರಗಳನ್ನು ಸಂಗ್ರಹಿಸುವ ಗೀಳು ಕೂಡಾ ಜಾಸ್ತಿ ಆಯಿತು. ಆ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಂಡರು.ಪರಿಣಾಮವಾಗಿ ಮ್ಯೂಸಿಯಂ ಕುರಿತಾದ ಅರಿವು ,ಹಳೆಯ/ಅಮೂಲ್ಯ ಪಾರಂಪರಿಕ -ಜಾನಪದ ವಸ್ತುಗಳನ್ನು ಮ್ಯೂಸಿಯಂ ದಲ್ಲಿ ಶೇಖರಿಸುವ ,ಒಪ್ಪವಾಗಿರಿಸುವ ಕುರಿತು ಅನೇಕ ಪ್ರಾಜ್ಞರುಗಳ ಜೊತೆ ಚರ್ಚೆ ನಡೆಸಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು.ತತ್ ಪರಿಣಾಮ -ಮೈಸೂರಿನ ವಿ ವಿಯಲ್ಲಿ ದೇ.ಜ.ಗೌ ಬೆಂಬಲದಿಂದ ತಿಪ್ಪೇಸ್ವಾಮಿರವರಿಂದ ಒಳ್ಳೆಯ ಜಾನಪದ ಮ್ಯೂಸಿಯಂ ರೂಪುತಳೆಯಿತು. ಇವರಿಂದಸುತ್ತೂರು, ಚಿತ್ರ ದುರ್ಗ ಮಠಗಳಿಗೆ ವಸ್ತು ಸಂಗ್ರಹಾಲಯ ಪರಿಕಲ್ಪನೆ ಸಿದ್ಧವಾಗಿ ಸಾಕಾರಗೊಂಡಿತು.ಧರ್ಮಸ್ಥಳದಲ್ಲಿ ‘ಮಂಜುಷಾ’ಮ್ಯೂಸಿಯಂ ಬಹಳ ಸುವ್ಯವಸ್ಥಿತಗೊಂಡಿತು.
ಪಿ ಆರ್ ತಿಪ್ಪೇಸ್ವಾಮಿ ‘ಆರ್ ಎಸ್. ನಾಯ್ಡು’,’ಕಲೋಪಾಸಕರು’,’ಶಿಲ್ಪಿ ಸಂಕುಲ’ ಸೇರಿದಂತೆ ಸುಮಾರು17ದೃಶ್ಯ ಕಲಾ ಪುಸ್ತಕಗಳನ್ನು ಬರೆದಿದ್ದಾರೆ.
1994ರ ಹೊತ್ತಿಗೆ ಒಂದು ಅವಧಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದರು.ಆವಾಗ ಅಕಾಡೆಮಿದಿಂದ ಅನೇಕ ಪುಸ್ತಕಗಳನ್ನು ಪ್ರಕಟ ಮಾಡಿದರು.
ವರಕವಿ ಅಂಬಿಕಾತನಯ ದತ್ತ ರು ಇವರ ಜಾನಪದ ಆಸಕ್ತಿಯನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.
ಕುವೆಂಪು ಇವರ ನಿಸರ್ಗ ಚಿತ್ರಗಳನ್ನು ಕಂಡು ಸಂತೋಷಗೊಂಡು ಕವಿತೆಯನ್ನೇ ರಚಿಸಿರುವರು.
ಜೀವನಪರ್ಯಂತ ಸಂಸಾರವಂತರಾಗದೇ ಉಳಿದು ,ಸದಾ ‘ಕಲಾವಂತಿಕೆ’ಯನ್ನೇ ಸಂಗಾತಿ ಮಾಡಿಕೊಂಡಿದ್ದ ಪಿ ಆರ್ ಟಿ ಮೈಸೂರಲ್ಲಿ ನೆಲೆಸಿದ್ದರು. ಜಾತಿ-ಮತಗಳ ಭೇದವಿಲ್ಲದೆ ಅನೇಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದವರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ-ಪುರಸ್ಕಾರಗಳಿಂದ ಗೌರವಿಹಲ್ಪಟ್ಟಿದ್ದ ಈ ಮಹಾನ್ ಕಲಾಚೇತನದ ಹೆಸರಲ್ಲಿ ಪ್ರತಿಷ್ಠಾನ ಹುಟ್ಟಿಕೊಂಡಿದ್ದು ಅದು ಕನ್ನಡ&ಸಂಸ್ಕೃತಿ ಇಲಾಖೆ ಹಾಗೂ ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ದಿ-18.4.2023ರಂದು ‘ಪಿ ಆರ್ ತಿಪ್ಪೇಸ್ವಾಮಿ ಕಲಾ ಸಂಭ್ರಮ-2023&ಪಿ ಆರ್ ಟಿ ಕಲಾಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿ,ತದಂಗವಾಗಿ ಪಿ ಆರ್ ಟಿಯವರ ಕಲಾಕೃತಿಗಳ ಪ್ರದರ್ಶನ ,ಉಪನ್ಯಾಸ, ಸಂವಾದ ಕಾರ್ಯಕ್ರಮ ಆಯೋಜಿಸಿದೆ.
———ಲೇಖನ—ದತ್ತಾತ್ರೇಯ ಎನ್. ಭಟ್ಟ