ಕಲಾಪಕ್ಕೆ ವಿಪಕ್ಷಗಳ ಅಡ್ಡಿ ಕಾಗೇರಿ ಅಸಮಾಧಾನ

ಬೆಂಗಳೂರು, ಮಾ. ೨೫- ವಿಧಾನಸಭೆಯನ್ನು ರಾಜಕೀಯ ವೇದಿಕೆಯನ್ನಾಗಿಸಿಕೊಳ್ಳುವ ಮನಸ್ಥಿತಿಯಿಂದ ವಿಧಾನಸಭಾ ಸದಸ್ಯರುಗಳು ಹೊರ ಬರಬೇಕು. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆಯಬೇಕು. ಚರ್ಚೆಗಳಿಗೆ ಅಡ್ಡಿ ಮಾಡುವುದು ಅಕ್ಷಮ್ಯ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ಭೇದಗಳು ಸಹಜ. ಆದರೆ ಅದನ್ನೆ ಮುಂದಿಟ್ಟುಕೊಂಡು ಸದನದ ಕಲಾಪಗಳಿಗೆ ಅಡ್ಡಿ ಮಾಡಿ ಇತರ ಸದಸ್ಯರ ಹಕ್ಕುಗಳನ್ನು ಮೊಟಕು ಮಾಡುವುದು ಸರಿಯಲ್ಲ. ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷಗಳು ನಡೆದುಕೊಂಡ ರೀತಿ ತಮಗೆ ಬೇಸರ ತಂದಿದೆ, ಖೇದ ಉಂಟು ಮಾಡಿದೆ ಎಂದರು.
ಸದನದ ಕಲಾಪಕ್ಕೆ ಅಡ್ಡಿ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರಲ್ಲ. ಪ್ರತಿಪಕ್ಷಗಳು ಈ ರೀತಿ ಅಸಹಕಾರ ಧೋರಣೆ ತಾಳಿರುವುದು ವ್ಯವಸ್ಥೆಯ ದುಸ್ಥಿತಿ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನಸಭೆಯಲ್ಲಿ ಜನರ ಭಾವನೆಗಳಿಗೆ ಅಡ್ಡಿ ಮಾಡುವುದು ಸರಿಯಲ್ಲ. ಚರ್ಚೆಯೇ ಆಗಬಾರದು ಎಂಬ ರೀತಿಯಲ್ಲಿ ನಡೆದುಕೊಳ್ಳುವುದು ಅಕ್ಷಮ್ಯ. ಇದನ್ನು ಜನತೆಯೂ ಒಪ್ಪಲ್ಲ, ಸಂವಿಧಾನ ಪ್ರಕಾರವೂ ಇದು ಸರಿಯಲ್ಲ ಎಂದರು.
ಜನಪ್ರತಿನಿಧಿಗಳಾದವರು ಸ್ವಯಂ ಶಿಸ್ತು, ಜಾಗೃತಿ ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ಸದನದಲ್ಲಿ ಸಚಿವರು, ಶಾಸಕರುಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಗೈರು ಹಾಜರಾಗುವುದೂ ಸರಿಯಲ್ಲ ಎಂದು ಅವರು ತಿಳಿಸಿದರು.
ಸದನವನ್ನು ನಿರ್ಲಕ್ಷಿಸುವುದು ತರವಲ್ಲ. ಸದನ ನಡೆಯುವ ಸಂದರ್ಭದಲ್ಲಿ ಶಾಸಕರು ಬೇರೆ ಕಾರ್ಯಕ್ರಮಗಳನ್ನು ಬದಿಗಿಟ್ಟು ಸದನದಲ್ಲಿ ಸಕ್ರಿಯರಾಗುವ ಅಗತ್ಯವಿದೆ. ಈಗಿನಿಂದಲೇ ಈ ಬಗ್ಗೆ ಸಚಿವರು, ಶಾಸಕರು ಸಂಕಲ್ಪ ಮಾಡಬೇಕು ಎಂದು ಅವರು ಹೇಳಿದರು.
ಜನಪ್ರತಿನಿಧಿಗಳು ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ ಎಂದರು.
ನಿಯಮಾವಳಿಗಳಂತೆ ಕ್ರಮ
ಸಚಿವ ಸುಧಾಕರ್ ಅವರು ಶಾಸಕರುಗಳ ನೈತಿಕತೆಯ ಬಗ್ಗೆ ನೀಡಿದ ಹೇಳಿಕೆಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ನನಗೂ ಪತ್ರ ಬರೆದಿದ್ದಾರೆ. ಆ ಬಗ್ಗೆ ಹೆಚ್ಚು ಮಾತನಾಡಲ್ಲ. ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದವರು ಸಚಿವ ಸುಧಾಕರ್ ವಿರುದ್ಧ ನೀಡಿರುವ ದೂರನ್ನು ಗಂಭೀರವಾಗಿ ತೆಗೆದುಕೊಂಡು ನಿಯಮಾವಳಿಗಳಂತೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಸಬಾಧ್ಯಕ್ಷರು ನೀಡಿದರು,