ಕಲಾಪಕ್ಕೆ ಅಡ್ಡಿ ಆರೋಪ: ವಿಪಕ್ಷಗಳ 19 ರಾಜ್ಯಸಭಾ ಸದಸ್ಯರು 1 ವಾರ ಅಮಾನತ್ತು

ನವದೆಹಲಿ,ಜು. 26- ಬೆಲೆ ಏರಿಕೆ ಸೇರಿದಂತೆ ವಿವಿಧ ವಿಷಯಗಳ ಚರ್ಚೆಗೆ ಬಿಗಿ ಪಟ್ಟು ಹಿಡಿದು ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಿರೋಧ ಪಕ್ಷಗಳ 19 ಸದಸ್ಯರನ್ನು ರಾಜ್ಯಸಭೆಯ ಕಲಾಪದಿಂದ ಒಂದು ವಾರದವರೆಗೆ ಅಮಾನತು ಮಾಡಲಾಗಿದೆ.

ಲೋಕಸಭೆಯಲ್ಲಿ ನಾಲ್ವರು ಕಾಂಗ್ರೆಸ್ ಸಂಸದರನ್ನು ಆಗಸ್ಟ್ 12 ರ ತನಕ ಅಂದರೆ ಮುಂಗಾರು ಅಧಿವೇಶನ ಪೂರ ಅಮಾನತುಗೊಳಿಸಿದ ಒಂದು ದಿನದ ನಂತರ ಇತ್ತೀಚಿನ ಅಮಾನತು ಮಾಡಲಾಗಿದೆ.

“ರಾಜ್ಯಸಭೆಯಿಂದ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವ ನಿರ್ಧಾರವನ್ನು ಭಾರವಾದ ಹೃದಯದಿಂದ ತೆಗೆದುಕೊಳ್ಳಲಾಗಿದೆ. ಸದಸ್ಯರು
ಸಭಾಪತಿಯ ಮನವಿಗಳನ್ನು ನಿರ್ಲಕ್ಷಿಸುತ್ತಲೇ ಇದ್ದರು” ಎಂದು ರಾಜ್ಯಸಭೆಯ ಆಡಳಿತ ಪಕ್ಷದ ನಾಯಕ ಪಿಯೂಷ್ ಗೋಯಲ್ ಹೇಳಿದ್ದಾರೆ.

“ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನಾರೋಗ್ಯದಿಂದ ಚೇತರಿಸಿಕೊಂಡು ಸಂಸತ್ತಿಗೆ ಮರಳಿದ ನಂತರ ಬೆಲೆ ಏರಿಕೆ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಾಗಿದೆ” ಎಂದು ಹೇಳಿದ್ದಾರೆ

ಅಮಾನತ್ ಗೊಂಡ ರಾಜ್ಯಸಭಾ ಸದಸ್ಯರ ಪೈಕಿ ಟಿಎಂಸಿ 7 ಮಂದಿ ,ಡಿಎಂಕೆಯ 5 ಮಂದಿ ,ಟಿಆರ್ ಎಸ್ ಮತ್ತು ಸಿಪಿಐಎಂ ನ ತಲಾ ಇಬ್ಬರು, ಸಿಪಿಐ‌ನ ಓರ್ವ ಸದಸ್ಯ‌ ಸೇರಿ 19 ಮಂದಿಯನ್ನು ಅಮಾನತ್ತು ಮಾಡಲಾಗಿದೆ.

ಧ್ವನಿ ಹತ್ತಿಕ್ಕುವ ಯತ್ನ:
ವಿರೋಧ ಪಕ್ಷಗಳ ಆರೋಪ;

19 ರಾಜ್ಯಸಭಾ ಸದಸ್ಯರ ವಿರುದ್ಧದ ಕ್ರಮ ಆಡಳಿತಾರೂಢ ಮೈತ್ರಿಕೂಟದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನು ಪ್ರಶ್ನಿಸುವ ದನಿಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.

ಕೇ‌ಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಅಮಾನತುಗೊಳಿಸಿದೆ” ಎಂದು ತೃಣಮೂಲ ನಾಯಕ ಡೆರೆಕ್ ಒ’ಬ್ರಿಯಾನ್ ದೂರಿದ್ದಾರೆ.

ಅಮಾನತುಗೊಂಡ
ರಾಜ್ಯಸಭಾ ಸದಸ್ಯರು:

 • ಸುಶ್ಮಿತಾ ದೇವ್- ಟಿಎಂಸಿ
 • ಮೌಸಮ್ ನೂರ್- ಟಿಎಂಸಿ
 • ಶಾಂತಾ ಛೆಟ್ರಿ- ಟಿಎಂಸಿ
 • ಡೋಲಾ ಸೇನ್ ಟಿಎಂಸಿ
 • ಶಾಂತಾನು ಸೇನ್ – ಟಿಎಂಸಿ
 • ಅಭಿ ರಂಜನ್ ಬಿಸ್ವರ್- ಟಿಎಂಸಿ
 • ಎಂಡಿ ನಾದಿಮುಲ್ ಹಕ್- ಟಿಎಂಸಿ
 • ಎಂ ಹಮಮದ್ ಅಬ್ದುಲ್ಲಾ- ಡಿಎಂಕೆ
 • ಬಿ ಲಿಂಗಯ್ಯ ಯಾದವ್, ತೆಲಂಗಾಣ ರಾಷ್ಟ್ರ ಸಮಿತಿ – ಟಿಆರ್ ಎಸ್
 • ಎ.ಎ. ರಹೀಮ್, ಸಿಪಿಐ(ಎಂ)
 • ರವಿಹಂದರ ವಡ್ಡಿರಾಜು, ಟಿ.ಆರ್.ಎಸ್
  *ಎಸ್ ಕಲ್ಯಾಣಸುಂದರಂ, ಡಿಎಂಕೆ
 • ಆರ್ ಗಿರಂಜನ್, ಡಿಎಂಕೆ
 • ಎನ್ಆರ್ ಎಲಾಂಗೋ, ಡಿಎಂಕೆ
 • ವಿ ಶಿವದಾಸನ್, ಸಿಪಿಐ(ಎಂ)
 • ಎಂ ಷಣ್ಮುಗಂ, ಡಿಎಂಕೆ
 • ದಾಮೋದರ್ ರಾವ್ ದೇವಿಕೊಂಡ- ಟಿಆರ್ ಎಸ್
 • ಸಂತೋಷ್ ಕುಮಾರ್ ಪಿ, ಸಿಪಿಐ
 • ಕನಿಮೊಳಿ -, ಡಿಎಂಕೆ

ಕಳೆದ ಹಲವು ದಿನಗಳಿಂದ ಬೆಲೆ ಏರಿಕೆ ಮತ್ತು ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್ ಟಿ ಹೆಚ್ಚಳದಂತಹ ವಿಷಯಗಳ ಕುರಿತು ತುರ್ತು ಚರ್ಚೆಗೆ ಒತ್ತಾಯಿಸುತ್ತಿದೆ, ಇದರಿಂದ ಸದನದ‌ ಕಲಾಪಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.