ಕಲಾಕಾರನ ಸಿನಿ ಬದುಕಿಗೆ ರಜತ ಸಂಭ್ರಮ…

ಅಭಿನಯದ ಮೂಲಕ ಗುರುತಿಸಿಕೊಂಡಿರುವ ಕಲಾಕಾರ್ ಖ್ಯಾತಿಯ  ನಟ ಹರೀಶ್ ರಾಜ್  ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾರೆ. 1997 ರಲ್ಲಿ ರಾಜೇಂದ್ರ ಸಿಂಗ್ ಬಾಬು  ನಿರ್ದೇಶನದ  ಸೌಂದರ್ಯ ನಟಿಸಿದ್ದ “ದೋಣಿ ಸಾಗಲಿ” ಚಿತ್ರದ  ಮೂಲಕ ಬಣ್ಣದ ಜಗತ್ತು ಪ್ರವೇಶಿದ್ದ ಹರೀಶ್ ಹರೀಶ್ ರಾಜ್  ,ಚಿತ್ರರಂಗ ಪ್ರವೇಶಿಸಿ 25 ವರ್ಷಗಳು ಕಳೆದಿದೆ.

ಬಳಿಕ ನಿರ್ದೇಶಕ ಗಿರೀಶ್ ಕಾಸರವಳ್ಳಿ  ನಿರ್ದೇಶಿಸಿದ್ದ “ತಾಯಿ ಸಾಹೇಬ” ಚಿತ್ರದಲ್ಲಿ ನಟಿಸುವ  ಮೂಲಕ‌ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲು ಹತ್ತುವ ಅವಕಾಶ ಪಡೆದು, ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ.

ಚಿತ್ರರಂಗ ಪ್ರವೇಶಿಸಿ ರಜತ ಮಹೋತ್ಸವ ಪೂರೈಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಸುನೀಲ್ ಪುರಾಣಿಕ್, ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಿರ್ಮಾಪಕ ಮಧುಸೂದನ್ ಗೌಡ ಮತ್ತಿತರರು ಅಗಮಿಸಿ ಶುಭ ಹಾರೈಸಿದರು.

ಈ ವೇಳೆ ಮಾತಿಗಿಳಿದ ಹರೀಶ್ ರಾಜ್,ಮೊದಲ ಚಿತ್ರದಲ್ಲಿ ಅವಕಾಶ ನೀಡಿದ ನಿರ್ದೇಶಕ, ನಿರ್ಮಾಪಕರನ್ನು  ಕೃತಜ್ಞತೆಯಿಂದ ಸ್ಮರಿಸಿದರು. 25 ವರ್ಷಗಳ ಸಿನಿಮಾ ಜೀವನದಲ್ಲಿ  60 ಕ್ಕೂ ಹೆಚ್ಚು ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ.ಬಣ್ಣದ ಜಗತ್ತಿನಲ್ಲಿ ಸಾಧನೆ ಮಾಡಿದ್ದರೆ  ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಲಾವಿದರು ಹಾಗೂ ಮಾಧ್ಯಮ‌‌‌ಕಾರಣ. ಚಿತ್ರರಂಗಕ್ಕೆ ಚಿರ ಋಣಿ ಎಂದರು.

ಹಿರಿಯ ನಿರ್ದೇಶಕ  ಗಿರೀಶ್ ಕಾಸರವಳ್ಳಿ, “ತಾಯಿಸಾಹೇಬ” ಚಿತ್ರದಲ್ಲಿ ಲವಲವಿಕೆಯಿಂದ ನಟಿಸಿದ್ದರು. ನಂತರ  “ದ್ವೀಪ” ಚಿತ್ರದಲ್ಲೂ ಅಭಿನಯಿಸಿದ್ದರು. ಚಿತ್ರದ ಅಭಿನಯಕ್ಕಾಗಿ  ರಾಷ್ಟ್ರೀಯ ಪ್ರಶಸ್ತಿ ಸ್ಪರ್ದೆಯಲ್ಲಿದ್ದರು. ಹರೀಶ್ ರಾಜ್ ಉತ್ತಮ ನಟ. ಒಳ್ಳೆಯ ಅವಕಾಶಗಳು ಸಿಗಲಿ   ಹಾರೈಸಿದರು.