ಕಲಬೆರಕೆ ಸಾಮಾಜಿಕ ಪಿಡುಗು: ಪ್ರೊ.ಪಾಟೀಲ

ಧಾರವಾಡ,ಮಾ5: ಜಗತ್ತಿನಲ್ಲಿ ಜನಿಸಿದ ಪ್ರತಿಯೊಂದು ಜೀವಿಯ ದೇಹದ ಬೆಳವಣಿಗೆಗೆ ಆಹಾರ Àತುಂಬಾ ಅಗತ್ಯವಾಗಿದೆ. ಬಣ್ಣ ಬಣ್ಣದ ಆಹಾರದ ವಸ್ತುಗಳಿಗೆ ಇಂದು ಮನುಷ್ಯ ಮಾರುಹೋಗುತ್ತಿರುವುದರಿಂದ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ. ಅಂತೆಯೇ ಕಲಬೆರಕೆ ಎನ್ನುವುದು ಇವತ್ತಿನ ಸಾಮಾಜಿಕ ಪಿಡುಗಾಗಿದೆ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಹಾಗೂ ರಾಯಚೂರಿನ ಲಕ್ಷ್ಮಿ-ವೆಂಕಟೇಶ ದೇಸಾಯಿ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಸಿ. ಡಿ. ಪಾಟೀಲ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಆಹಾರದಲ್ಲಿ ಕಲಬೆರಕೆ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ಕಲಬೆರಕೆ ಆಹಾರ ಸೇವನೆಯಿಂದ ಮನುಷ್ಯನಿಗೆ ಅಷ್ಟೇ ಅಲ್ಲ, ಪ್ರಾಣಿಗಳಿಗೂ ಕೂಡ ಖಾಯಿಲೆಗಳು ಬರುತ್ತವೆ. ಪ್ರಾಣಿಗಳು ದಷ್ಟಪುಷ್ಟವಾಗಿ ಬೆಳೆಯಲು ಡಿ.ಇ.ಎಸ್.(ಡೈಇಥೈಲ್ ಸ್ಟಿಲ್ ಬೆಸ್ಟ್ರಾಲ್ ಹಾರ್ಮಾನ್) ಉಪಯೋಗಿಸುವುದರಿಂದ ಪ್ರಾಣಿಗಳಲ್ಲಿ ಕರಳು ಬೇನೆ, ಕ್ಯಾನ್ಸರ್ ರೋಗಗಳು ಬರುತ್ತವೆ ಎಂಬುದನ್ನು ಚಿತ್ರಗಳ ಸಮೇತ ಸವಿವರವಾಗಿ ವಿವರಿಸಿ, ಜನರಿಗೆ ತಿಳುವಳಿಕೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್. ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವೆಂಕಟೇಶ ಮುತಾಲಿಕ ಮಾತನಾಡಿ, ಬೋರ್ ನೀರಿನ ಸೇವನೆಯಿಂದ ಬರುವ ಖಾಯಿಲೆಗಳು, ಯಾವ ಯಾವ ಕಲಬೆರಕೆ ಆಹಾರ ಸೇವನೆಯಿಂದ ಏನೇನು ಅನಾಹುತಗಳಾಗುತ್ತವೆ. ಈ ರೀತಿಯ ತಿಳುವಳಿಕೆ ಶಾಲೆ-ಕಾಲೇಜುಗಳಲ್ಲೂ ನಡೆಯಬೇಕಾದ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಮಂಟಪದ ಸಂಚಾಲಕ ಡಾ.ಜಿನದತ್ತ ಅ. ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಜಿ. ಬಾರ್ಕಿ ಸ್ವಾಗತಿಸಿದರು.ಡಾ. ಅರುಣ ಶಿರಹಟ್ಟಿ ಅತಿಥಿಗಳನ್ನ ಪರಿಚಯಿಸಿದರು. ನವೀನಶಾಸ್ತ್ರಿ ಪುರಾಣಿಕ ನಿರೂಪಿಸಿದರು.
ಸಮಾರಂಭದಲ್ಲಿ ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಶಂಕರ ಕುಂಬಿ, ಡಾ.ಶೈಲಜಾ ಅಮರಶೆಟ್ಟಿ, ಶಶಿಧರ ಉಜ್ಜಿನಿ, ಮಹಾವೀರ ಉಪಾಧ್ಯೆ, ಎಂ.ಎಂ.ಚಿಕ್ಕಮಠ, ಸುಜಾತಾ ಹಡಗಲಿ, ಎಸ್.ಎಂ.ದಾನಪ್ಪಗೌಡರ, ಗಣೇಶ ಅಮಿನಗಡ, ಮಹಾಂತೇಶ ನರೇಗಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.