ಕಲಬುರಗಿ:40 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ ರಣ ಬಿಸಿಲಿಗೆ ಜನ ತತ್ತರ

ನಾಗರಾಜ ಹೂವಿನಹಳ್ಳಿ
ಕಲಬುರಗಿ,ಏ.21-ಬಿಸಿಲು ನಾಡು ಎಂದೇ ಕರೆಯಲ್ಪಡುವ ಕಲಬುರಗಿ ಈಗ ಅಕ್ಷರಶ: ಕಾದ ಕೆಂಡವಾದಂತಾಗಿದೆ. ರಣ ಬಿಸಿಲು ಜನರನ್ನು ಹೈರಾಣು ಮಾಡಿದೆ.
ಕಲಬುರಗಿಯಲ್ಲಿ ಗುರುವಾರ ರಾಜ್ಯದಲ್ಲಿಯೇ ಅತ್ಯಧಿಕ ಅಂದರೆ, 41.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನುಳಿದಂತೆ ನೆರೆಯ ವಿಜಯಪುರ ಜಿಲ್ಲೆಯಲ್ಲಿ 40.5, ಬೀದರ್ ಜಿಲ್ಲೆಯಲ್ಲಿ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಸೂರ್ಯೋದಯವಾಗುತ್ತಿದ್ದಂತೆಯೇ ಬಿಸಿಲ ತಾಪ ಶುರುವಾಗುತ್ತಿದ್ದು, ಮಧ್ಯಾಹ್ನದ ವೇಳೆಗೆ ಭೂಮಿ ಕಾದು ಕೆಂಡವಾಗುತ್ತಿದೆ. ಸಂಜೆ 6ರವರೆಗೂ ಬಿಸಿಲ ತಾಪ ತಗ್ಗದೇ ಇರುವುದರಿಂದ ಮಧ್ಯಾಹ್ನದ ವೇಳೆ ಮನೆಯಿಂದ ಹೊರ ಬರಲೂ ಸಹ ಜನ ಹಿಂದೇಟು ಹಾಕುತ್ತಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಸಿಲ ತಾಪ ಹೆಚ್ಚಾಗಿದ್ದು, ಮಧ್ಯಾಹ್ನದ ವೇಳೆ ಹೊರಗಡೆ ಓಡಾಡುವುದು ಕೆಂಡದ ಮೇಲೆ ನಡೆದಂತಾಗುತ್ತಿದೆ. ಈ ಬಾರಿ ಬಿಸಿಲು ಭಯಂಕರವಾಗಿದೆ ಎಂದು ಜನ ಅಲವತ್ತುಕೊಳ್ಳುತ್ತಿದ್ದಾರೆ.
ಬಿಸಿಲಿನ ತಾಪದಿಂದ ಭೂಮಿ ಹಗಲು ಕಾದು ಕೆಂಡವಾಗುತ್ತಿರುವುದರಿಂದ ರಾತ್ರಿ ಧಗೆ ಹೆಚ್ಚಾಗಿ ಜನ ಬೆವೆತು ಹೋಗುವಂತಾಗಿದೆ. ಬಿಸಿಲ ತಾಪ ತಣಿಸಿಕೊಳ್ಳಲು ಫ್ಯಾನ್, ಏಸಿ, ಏರ್ ಕೂಲರ್ ಬಳಕೆ ಮಾಡುತ್ತಿದ್ದರೂ ಬಿಸಿಲ ತಾಪ ಹೆಚ್ಚಾಗಿರುವುರಿಂದ ಬಿಸಿಗಾಳಿ ಜನರನ್ನು ಕಸಿವಿಸಿಯಾಗುವಂತೆ ಮಾಡಿದೆ.
ಬಿಸಿಲ ಬೇಗೆ ತಣಿಸಿಕೊಳ್ಳಲು ಜನ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದು, ಇದರಿಂದಾಗಿ ಕಲ್ಲಂಗಡಿ, ಎಳೆನೀರು, ಕಬ್ಬಿನ ಹಾಲು ಮಾರಾಟವೂ ಜೋರಾಗಿಯೇ ನಡೆದಿದೆ.
ಚುನಾವಣಾ ಕಾವು
ಜಿಲ್ಲೆಯಲ್ಲಿ ಒಂದೆಡೆ ಸುಡು ಬಿಸಿಲು ಇನ್ನೊಂದೆಡೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿರು ಬಿಸಿಲನ್ನು ಲೆಕ್ಕಿಸದೇ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ಬೆಂಬಲಿಗರು ಮತ್ತು ಕಾರ್ಯಕರ್ತರು ಪ್ರಚಾರದ ಭರಾಟೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಕಿಯಂತ ಬಿಸಿಲು ಅಕ್ಷರಶ: ಅಭ್ಯರ್ಥಿಗಳ ಬೆವರಿಳಿಸುತ್ತಿದೆ.