ಕಲಬುರಗಿ ಹಲವೆಡೆ ಮಳೆ: ಸಿಡಿಲಿಗೆ ಹಸು ಬಲಿ

ಕಲಬುರಗಿ,ಏ.29-ಕಳೆದ ರಾತ್ರಿ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಗಡುಗು ಸಹಿತ ಭಾರಿ ಮಳೆಯಾಗಿದೆ. ಅಫಜಲಪುರ ತಾಲ್ಲೂಕಿನ ಗೊಬ್ಬೂರ ವಾಡಿ ತಾಂಡಾದಲ್ಲಿ ಸಿಡಿಲು ಬಡಿದು ಹಸು ಸಾವನ್ನಪ್ಪಿದೆ. ವಿಜಯಕುಮಾರ ವಿಠಲ ರಾಠೋಡ್ ಎಂಬುವವರಿಗೆ ಸೇರಿದ ಹಸು ಸಿಡಿಲಿಗೆ ಬಲಿಯಾಗಿದ್ದು, ದೇವಲ ಗಾಣಗಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯ ಕಲಬುರಗಿ 2, ಕಮಲಾಪುರ, ಮಹಾಗಾಂವ 5, ಸುಲೇಪೇಟ್, ಫರತಾಬಾದ 3, ಸೇಡಂ, ನಿಂಬರಗಿ 2 ಸೆಂಟಿ ಮೀಟರ್ ಮಳೆಯಾಗಿದೆ.
ತಂಪು ತಂದ ಮಳೆ
ಕಳೆದೆರೆಡು ದಿನಗಳಿಂದ ಸುರಿದ ಮಳೆಯಿಂದಾಗಿ ಬಿಸಿಲು ನಾಡು ಕಲಬುರಗಿ ಸ್ವಲ್ಪ ತಂಪಾಗಿದೆ. ಬಿರು ಬಿಸಲಿನಿಂದ ಬಸವಳಿದು ಹೋಗಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಬಿಸಿಲಿನ ತಾಪ ಸ್ವಲ್ಪ ತಗ್ಗಿದಂತಾಗಿದೆ.